ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ವಸತಿ ಇಲಾಖೆಯಲ್ಲಿ ಮನೆ ಪಡೆಯಬೇಕಾದರೆ ಹಣ ನೀಡಬೇಕು ಎನ್ನುವ ಆರೋಪವನ್ನು ಆಡಳಿತ ಪಕ್ಷವಾದ ಕಾಂಗ್ರೆಸ್‌ನ ಶಾಸಕರೇ ಮಾಡಿದ್ದಾರೆ. ಹೀಗಾಗಿ ಈ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ಸಚಿವರು, ಅಧಿಕಾರಿಗಳ ವಿರುದ್ಧ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರು ಕ್ರಮಕೈಗೊಳ್ಳಬೇಕು. ಸಚಿವರಿಂದ ರಾಜೀನಾಮೆ ಪಡೆಯಬೇಕು. ಹಗರಣದಲ್ಲಿ ಭಾಗಿಯಾದವರಿಗೆ ಶಿಕ್ಷೆಯಾಗುವ ತನಕ ನಾವು ನಿರಂತರವಾಗಿ ಹೋರಾಟ ನಡೆಸಲಿದ್ದೇವೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಕೆ ನೀಡಿದರು.
ಅವರು ಕೋಟ ಗ್ರಾ.ಪಂ. ಆವರಣದಲ್ಲಿ, ಬಿಜೆಪಿ ವತಿಯಿಂದ ಕಾಂಗ್ರೆಸ್ ಸರಕಾರದ ವೈಪಲ್ಯಗಳ ವಿರುದ್ಧ ಹಮ್ಮಿಕೊಳ್ಳಲಾದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಸರಕಾರ ಎಕವಿನ್ಯಾಸ ನಕ್ಷೆ, 11-ಇ ನೀಡುವ ಅಧಿಕಾರವನ್ನು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೀಡಿದೆ. ಉಡುಪಿ ಪ್ರಾಧಿಕಾರದಲ್ಲಿ ಯಾವುದೇ ಕೆಲಸವಾಗುತ್ತಿಲ್ಲ. ಇನ್ನಾದರೂ ಸರಕಾರ ನಗರಾಭಿವೃದ್ಧಿ ಪ್ರಾಧಿಕಾರದ ಹಕ್ಕನ್ನು ಮರಳಿ ಗ್ರಾಮ ಪಂಚಾಯತ್‌ಗೆ ನೀಡಬೇಕು ಎಂದರು.
ಉಡುಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಮಾತನಾಡಿದರು. ಬಿಜೆಪಿ ಪ್ರಮುಖರಾದ ಶಂಕರ್ ಅಂಕದಕಟ್ಟೆ, ಕೋಟ ಗ್ರಾ.ಪಂ. ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ, ಮಾಜಿ ಅಧ್ಯಕ್ಷ ಅಜಿತ್ ದೇವಾಡಿಗ, ಸ್ಥಳೀಯ ಪ್ರಮುಖರಾದ ಮಹೇಶ್ ಹೊಳ್ಳ, ಸೀಮಾ ನಾಗರಾಜ್ ಗಾಣಿಗ, ಲಲಿತಾ ಪೂಜಾರಿ, ವನಿತಾ ಶ್ರೀಧರ ಆಚಾರ್, ಹಾಗೂ ಗ್ರಾ.ಪಂ. ಸದಸ್ಯರು ಇದ್ದರು.
ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಪ್ರಸಾದ್ ಬಿಲ್ಲವ ಕಾರ್ಯಕ್ರಮ ನಿರ್ವಹಿಸಿದರು.















