ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಯಡ್ತರೆ ಗ್ರಾಮದ ಹಡವಿನಗದ್ದೆ ಎಂಬಲ್ಲಿ ಮಸೂದ್ ಪಟೇಲ್ ಅವರ ಗೋಡೌನ್‌ನಲ್ಲಿದ್ದ ಸುಮಾರು 5 ಲಕ್ಷ 60 ಸಾವಿರ ರೂ. ಮೌಲ್ಯದ ಅಡಿಕೆ ಕದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕಡಬ ತಾಲೂಕು ನೂಜಿ ಬಾಳ್ತಿಲ ಗ್ರಾಮದ ಸಂತೋಷ್ (35), ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಹಿಂಡಿನಗೆರೆಯವನಾಗಿದ್ದು ಪ್ರಸ್ತುತ ಭಟ್ಕಳದಲ್ಲಿ ವಾಸವಾಗಿರುವ ಶಾನೂರು ಬಾಬುಲಾಲ್ ನವಾಜ್ ಘಜ್ನಿ (31), ಭಟ್ಕಳದ ಖ್ವಾಜಾ ಮಹಮ್ಮದ್ (26) ಮತ್ತು ಭಟ್ಕಳದ ಮಹಮ್ಮದ್ ಸಾಧಿಕ್ (27) ಬಂಧಿತ ಆರೋಪಿಗಳು. ಆರೋಪಿಗಳಿಂದ ಕಳವಾಗಿದ್ದ 455 ಕೆಜಿ ಅಡಿಕೆ ಮತ್ತು ಸಾಗಾಟಕ್ಕೆ ಬಳಸಿದ ಕಾರನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ.
ಮಸೂದ್ ಅವರು ಯಡ್ತರೆ ಗ್ರಾಮದ ಹಡಿನಗದ್ದೆಯಲ್ಲಿ 60 ಎಕ್ರೆ ಸ್ಥಳದಲ್ಲಿ ಕೃಷಿ ಮಾಡಿಕೊಂಡಿದ್ದಾರೆ. ತೋಟದಲ್ಲಿ ಬೆಳೆದ ಸುಮಾರು 200 ಚೀಲ ಒಣಗಿಸಿದ ಸಿಪ್ಪೆ ಸಹಿತ ಅಡಿಕೆಯನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಗೋಡೌನ್‌ನಲ್ಲಿ ಇರಿಸಿದ್ದರು. ಮೇ. 22ರಂದು ಬೆಳಗ್ಗೆ ಗೋಡೌನ್‌ಗೆ ಹೋಗಿ ನೋಡಿದಾಗ ಎದುರಿನ ಕಬ್ಬಿಣದ ಗ್ರಿಲ್‌ನ ಬಾಗಿಲಿನ ಬೀಗ ಮುರಿದಿತ್ತು. ಒಳಗೆ ಹೋದಾಗ 200 ಚೀಲ ಅಡಿಕೆಯನ್ನು ಕಳವು ಮಾಡಿರುವುದು ಕಂಡುಬಂದಿತು.
ಬೈಂದೂರು ಪರಿಸರದಲ್ಲಿ ಅಡಿಕೆ ಕಳ್ಳತನ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹರಿರಾಮ್ ಶಂಕರ ಅವರ ಮಾರ್ಗದರ್ಶನದಲ್ಲಿ, ಕುಂದಾಪುರ ಉಪವಿಭಾಗದ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸುಧಾಕರ ನಾಯ್ಕ, ಉಪಾಧೀಕ್ಷಕ ಎಚ್.ಡಿ. ಕುಲಕರ್ಣಿ ಹಾಗೂ ಪೊಲೀಸ್ ವೃತ್ತ ನಿರೀಕ್ಷಕ ಸವೀತ್ರ ತೇಜ್ ಅವರ ನೇತೃತ್ವದಲ್ಲಿ 2 ತಂಡಗಳನ್ನು ರಚಿಸಲಾಗಿತ್ತು.
ವಿವಿಧ ಠಾಣೆಗಳ ಪಿಎಸ್‌ಐಗಳಾದ ತಿಮ್ಮೇಶ್ ಬಿ.ಎನ್., ನವೀನ ಬೋರಕರ, ವಿನಯ ತಂಡಗಳ ನೇತೃತ್ವ ವಹಿಸಿದ್ದರು. ಸಿಬಂದಿಗಳಾದ ನಾಗೇಂದ್ರ, ಸುರೇಶ್, ಚಿದಾನಂದ, ಮಾಳಪ್ಪ ದೇಸಾಯಿ, ಪರಯ್ಯ ಮಠಪತಿ ರವೀಂದ್ರ, ಅಶೋಕ ಹಾಗೂ ಚಂದ್ರ ತಂಡದಲ್ಲಿದ್ದರು.















