ಕುಂದಾಪ್ರ ಡಾಟ್ ಕಾಂ ಸುದ್ದಿ.
ಶಂಕರನಾರಾಯಣ: ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ 2024 -25ನೇ ಸಾಲಿನ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಶಾಲಾ ವತಿಯಿಂದ ಸನ್ಮಾನ ಮತ್ತು 100%ಫಲಿತಾಂಶ ದಾಖಲಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮ ಜರುಗಿತು.
ಶಂಕರನಾರಾಯಣ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಂಕರನಾರಾಯಣ ಭಟ್ ಕೊಂಡಳ್ಳಿ ಅವರು ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, “ವಿದ್ಯಾರ್ಥಿಗಳು ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡು ವಿದ್ಯಾವಂತರೂ,ಸಂಸ್ಕಾರವಂತರೂ ಆಗಿ ಹೆತ್ತವರು ಮತ್ತು ಗುರುಗಳ ಕೃಪೆಗೆ ಪಾತ್ರರಾಗಿ ಸತ್ಪ್ರಜೆಗಳಾಗಿ ಬಾಳಬೇಕು” ಎಂದರು.

ಶಾಲಾ ಉಪ ಪ್ರಾಂಶುಪಾಲರಾದ ಮೋಹನ್ ರಾವ್ ಎಂ.ಜೆ.ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಶಾಲೆಯ ಶೈಕ್ಷಣಿಕ ಸಾಧನೆಗೆ ಶಿಕ್ಷಕರ, ವಿದ್ಯಾರ್ಥಿಗಳ ಮತ್ತು ಪಾಲಕರ ಪರಿಶ್ರಮವೇ ಕಾರಣ, ಶಿಕ್ಷಕರು ಮತ್ತು ಪೋಷಕರು ಜೊತೆಗೂಡಿದಾಗ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳನ್ನು ಅಭಿನಂದಿಸುವುದರೊಂದಿಗೆ ಎಲ್ಲರನ್ನೂ ಪ್ರೀತಿಯಿಂದ ಸ್ವಾಗತಿಸಿದರು.
ಮುಖ್ಯ ಅತಿಥಿಗಳೂ, ಶಾಲಾ ಹಳೆವಿದ್ಯಾರ್ಥಿ ಸಂಘದ ಕಾರ್ಯದರ್ಶಿಗಳಾದ ಡಾ. ಸಚ್ಚಿದಾನಂದ ವೈದ್ಯ ಅವರು ವಿದ್ಯಾರ್ಥಿಗಳ ಸಾಧನೆಯನ್ನು ಅಭಿನಂದಿಸುತ್ತಾ “ಪಾಲಕರು ದಿನದಲ್ಲಿ ಒಂದಿಷ್ಟು ಹೊತ್ತಾದರೂ ಮಕ್ಕಳೊಂದಿಗೆ ಕಾಲ ಕಳೆಯಬೇಕು, ಮಕ್ಕಳ ಒಡನಾಡಿಗಳ ಪೂರ್ಣ ಪರಿಚಯ ಅವರಿಗಿರಬೇಕು. ಮಕ್ಕಳು ಮೊಬೈಲ್ ದಾಸರಾಗದೇ ಆರೋಗ್ಯಕರ ಆಹಾರ ಪದ್ಧತಿಯೊಂದಿಗೆ ಉತ್ತಮ ಜೀವನಶೈಲಿ ರೂಪಿಸಿಕೊಂಡು ಆದರ್ಶ ವಿದ್ಯಾರ್ಥಿಗಳಾಗಬೇಕು” ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಅತ್ಯುತ್ತಮ ಅಂಕಗಳನ್ನು ಗಳಿಸಿದ ಸಾಧಕ ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಸಮ್ಮಾನಿಸಲಾಯಿತು. ಸಾಧಕ ವಿದ್ಯಾರ್ಥಿಗಳ ಪಾಲಕರನ್ನೂ ವೇದಿಕೆಗೆ ಕರೆದು ಗೌರವಿಸಲಾಯಿತು.
ಸಾಧಕ ವಿದ್ಯಾರ್ಥಿಗಳ ಪರವಾಗಿ ಮಾತನಾಡಿದ ಅಪೇಕ್ಷಾ, ಸಂಕೀರ್ಣ ಪ್ರಭು, ಕೆ.ವಿ.ಸೌಜನ್ಯಾ ಮತ್ತು ತನುಶ್ರೀ ಅವರು ತಮ್ಮ ಸಾಧನೆಗೆ ಪ್ರೋತ್ಸಾಹ ನೀಡಿದ ಶಿಕ್ಷಕರು ಮತ್ತು ಹೆತ್ತವರನ್ನು ಸ್ಮರಿಸಿದರು. ಸಮ್ಮಾನ ಕಾರ್ಯಕ್ರಮವನ್ನು ಕನ್ನಡ ಶಿಕ್ಷಕರಾದ ಶ್ರೀ ಕೃಷ್ಣ ದೇವಾಡಿಗ ಅವರು ನಡೆಸಿ ಕೊಟ್ಟರು. ಅಲ್ಲದೇ ಸತತ ಎರಡನೆಯ ಬಾರಿಗೆ 100%ಫಲಿತಾಂಶ ಸಾಧಿಸಿ ಶಾಲೆಯ, ಊರಿನ ಮತ್ತು ಹೆತ್ತವರ ಕೀರ್ತಿ ಹೆಚ್ಚಿಸಿದ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಸರ್ವ ಸಂಘಗಳ ಉದ್ಘಾಟನಾ ಕಾರ್ಯಕ್ರಮದ ವಿವರವನ್ನು ದೈಹಿಕ ಶಿಕ್ಷಣ ಶಿಕ್ಷಕರಾದ ಸುನೀಲ್ ಕುಮಾರ್ ಅವರು ವಾಚಿಸಿದರು. ಎಲ್ಲ ಸಂಘಗಳ ಅಧ್ಯಕ್ಷರನ್ನು ವೇದಿಕೆಗೆ ಕರೆಸಿ ಹೂವನ್ನು ನೀಡಿ ಅಭಿನಂದಿಸಲಾಯಿತು.
ಇದೇ ಸಂದರ್ಭದಲ್ಲಿ ಎನ್ ಎಂ ಎಂ ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ರಾಜೀವ ವಿ. ಅವರ ಸಾಧನೆಯನ್ನು ಗುರುತಿಸಲಾಯಿತು.
ಸಂಸ್ಥೆಯಲ್ಲಿ ಸಮಾಜ ವಿಜ್ಞಾನ ಶಿಕ್ಷಕಿಯಾಗಿದ್ದು ಪ್ರಸ್ತುತ ಕಂಡ್ಲೂರು ಪ್ರೌಢಶಾಲೆಗೆ ವರ್ಗಾವಣೆ ಹೊಂದಿರುವ ಜ್ಯೋತಿ ಅವರು ನೀಡಿದ ಶಾಲಾ ಸಂಸತ್ ನೂತನ ಸಂಸತ್ ಸದಸ್ಯರ ನಾಮಫಲಕವನ್ನು ಡಾ|ಸಚ್ಚಿದಾನಂದ ವೈದ್ಯರು ಉದ್ಘಾಟಿಸಿದರು. ನಾಯಕ, ಉಪನಾಯಕ ಮತ್ತು ಶಾಲಾ ಸಂಸತ್ ಸದಸ್ಯರಿಗೆ ಪ್ರತಿಜ್ಞಾ ವಿಧಿ ಬೋಧಿಸುವ ಕಾರ್ಯಕ್ರಮವನ್ನು ಪ್ರಮೀಳಾ ಅವರು ನಡೆಸಿಕೊಟ್ಟರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಜಗದೀಶ್ ಭಟ್ ಅವರು ಶಾಲೆಯು ಸತತ ಎರಡು ವರ್ಷಗಳಿಂದ 100% ಫಲಿತಾಂಶ ಸಾಧಿಸಿರುವುದಕ್ಕೆ ಅಭಿನಂದಿಸುತ್ತಾ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರ ತ್ರಿವೇಣಿ ಸಂಗಮದಿಂದ ಈ ಸಾಧನೆ ಸಾಧ್ಯವಾಗಿದೆ ಎಂದರು.
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಕಾರ್ಯಾಧ್ಯಕ್ಷರಾದ ಶ್ರೀಪ್ರಭಾ ಅವರು ಅಧ್ಯಕ್ಷತೆ ವಹಿಸಿದ್ದರು.
100%ಫಲಿತಾಂಶ ಸಾಧನೆಗೆ ಕಾರಣರಾದ ಶಿಕ್ಷಕರಿಗೆ ಎಸ್.ಡಿ.ಎಂ.ಸಿ.ವತಿಯಿಂದ ಉಡುಗೊರೆ ನೀಡಿ ಸತ್ಕರಿಸಲಾಯಿತು. ಪೂರ್ವ ವಿದ್ಯಾರ್ಥಿಗಳು ಎಲ್ಲ ಶಿಕ್ಷಕರಿಗೆ ಪುಷ್ಪವನ್ನು ನೀಡಿ ಗೌರವಿಸಿದರು.
ಮುಖ್ಯ ಅತಿಥಿಗಳೂ, ದಾನಿಗಳೂ, ಸೆಲ್ಕೋ ಸೋಲಾರ್ ಲಿ. ಮಣಿಪಾಲದ ಏರಿಯಾ ಮೇನೇಜರ್ ಆದ ಸುರೇಶ್ ನಾಯ್ಕ್ ಅವರು ಸಂಸ್ಥೆಯ ಸಾಧನೆಯನ್ನು ಪ್ರಶಂಸಿಸಿ ಸಂಸ್ಥೆಗೆ ಧನ ಸಹಾಯ ನೀಡಿದರು. ಸಂಸ್ಥೆಯ ಹೆಮ್ಮೆಯ ಪೂರ್ವ ವಿದ್ಯಾರ್ಥಿಯಾಗಿದ್ದು ಉನ್ನತ ಹುದ್ದೆಗೆ ಏರಿದ ರಾಘವೇಂದ್ರ ಪ್ರಭು ಅವರು ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು.
ಇದೇ ಸಂದರ್ಭದಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ನಿರ್ಗಮಿತ ಕಾರ್ಯಾಧ್ಯಕ್ಷರಾದ ಮುಕುಂದರಾಯ ಶೆಣೈ ಅವರ ಸೇವೆಯನ್ನು ಸ್ಮರಿಸಿ ಸಮ್ಮಾನಿಸಲಾಯಿತು.
ಎಸ್.ಡಿ.ಎಂ.ಸಿ.ಸದಸ್ಯರಾದ ಲಲಿತಾ ಶೆಟ್ಟಿ, ಶ್ರುತಿ ಕಾಮತ್, ಆನಂದ್, ಪೋಷಕರು, ವಿದ್ಯಾರ್ಥಿಗಳು, ಪೂರ್ವ ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ಮತ್ತು ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು.
ವಿಜ್ಞಾನ ಶಿಕ್ಷಕರಾದ ರಾಮನಾಥ ಶೆಣೈ ಅವರು ಕಾರ್ಯಕ್ರಮ ನಿರ್ವಹಿಸಿದರು. ಹಿಂದಿ ಭಾಷಾ ಶಿಕ್ಷಕರಾದ ಉದಯ್ ಕುಮಾರ್ ಅವರು ವಂದಿಸಿದರು.















