ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು: ಕೆರೆಗಳ ವಿಸ್ತೀರ್ಣಕ್ಕೆ ಅನುಗುಣವಾಗಿ ಬಫರ್ ಜೋನ್ ನಿಗದಿಪಡಿಸಲು ಅನುಕೂಲವಾಗುವಂತೆ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಮಸೂದೆ ರಾಜ್ಯ ಸರ್ಕಾರ ತಿದ್ದುಪಡಿ ತರಲು ಮುಂದಾಗಿರುವುದಕ್ಕೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ ಅವರು ಸರಕಾರದ ಕಾರ್ಯವೈಕರಿಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಾಲಿಗ್ರಾಮ ಪಟ್ಟಣ ಪಂಚಾಯಿತ ವ್ಯಾಪ್ತಿಯಲ್ಲಿನ ಕೆರೆಗಡಿ ಅಂಚಿನಿಂದ 30 ಮೀಟರ್ ಬಫರ್ ಜೋನ್ ಇರುವುದರಿಂದ ಸಾಲಿಗ್ರಾಮ ಪಟ್ಟಣ ಪಂಚಾಯಿತ ವ್ಯಾಪ್ತಿಯಲ್ಲಿ ಅತಿ ಕಡಿಮೆ ಜಾಗ ಹೊಂದಿರುವವರಿಗೆ ಮನೆ ನಿರ್ಮಾಣ ಹಾಗೂ ಇತರೆ ಅಭಿವೃದ್ಧಿ ಕೈಗೊಳ್ಳಲು ತುಂಬಾ ತೊಂದರೆ ಉಂಟಾಗುತ್ತಿದ್ದು ಈ ನಿಟ್ಟಿನಲ್ಲಿ ಶಾಸಕರು ಇಲಾಖಾ ಸಚಿವರು ಹಾಗೂ ಕಾರ್ಯದರ್ಶಿಗಳ ನಿರಂತರ ಸಂಪರ್ಕದಲ್ಲಿದ್ದು ಪ್ರಯತ್ನ ಫಲಪ್ರದ ಕಂಡಿದೆ.
ಕೆರೆಗಳ ವಿಸ್ತೀರ್ಣಕ್ಕೆ ಅನುಗುಣವಾಗಿ ಬಫರ್ ಜೋನ್ ನಿಗದಿಯಾದಲ್ಲಿ ತುಂಡು ಭೂಮಿ ಹೊಂದಿದವರಿಗೆ ತುಂಬಾ ಅನುಕೂಲವಾಗಲಿದೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿ ಶಾಸಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.










