ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ ಮುಂಗಾರು ಅಧಿವೇಶನದಲ್ಲಿ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಪ್ರಮುಖ ವಿಷಯವೊಂದನ್ನು ಪ್ರಸ್ತಾಪಿಸಿ ಸರಕಾರದ ಗಮನ ಸೆಳೆದಿದ್ದಾರೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗ್ರಾಮೀಣ ಭಾಗವಾದ ಶಂಕರನಾರಾಯಣ ಕೇಂದ್ರೀಕೃತವಾಗಿ ಸುತ್ತ ಮುತ್ತಲಿನ ಗ್ರಾಮಗಳ ಜನರು ಪ್ರಸ್ತುತ ಸುಮಾರು 40 ಕಿ. ಮೀ ದೂರದ ಹೋಬಳಿ ಕೇಂದ್ರಕ್ಕೆ ತೆರಳ ಬೇಕಾಗಿರುವುದರಿಂದ ಪ್ರಸ್ತುತ ಇರುವ ಬೈಂದೂರು ಹಾಗೂ ವಂಡ್ಸೆ ಹೋಬಳಿಗಳ ಜೊತೆಗೆ ಶಂಕರನಾರಾಯಣ ಗ್ರಾಮ ಕೇಂದ್ರಿತವಾಗಿ ಶಂಕರನಾರಾಯಣ ಭಾಗದ ಗ್ರಾಮಗಳನ್ನು ಸೇರಿಸಿಕೊಂಡು ಆಡಳಿತಾತ್ಮಕ ಹಿತದೃಷ್ಟಿಯಿಂದ ಪ್ರತ್ಯೇಕವಾದ ಶಂಕರನಾರಾಯಣ ಹೋಬಳಿ ರಚನೆ ಮಾಡಲು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರ ಸದನದಲ್ಲಿ ಚುಕ್ಕೆ ರಹಿತ ಪ್ರಶ್ನೆಯ ಮೂಲಕ ಸರಕಾರದ ಗಮನ ಸೆಳೆದಿದ್ದಾರೆ.
ರಾಜ್ಯ ಸರಕಾರದ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಉತ್ತರಿಸಿ, ಹೊಸದಾಗಿ ಹೋಬಳಿಗಳನ್ನು ರಚಿಸುವ ವಿಷಯವು ಸರ್ಕಾರದ ಸಾಮಾನ್ಯ ನೀತಿಗೆ ಸಂಬಂಧಿಸಿದ್ದಾಗಿದೆ. ನೂತನ ಹೋಬಳಿಗಳು ರಚಿಸಬೇಕಾದರೆ ಭೌಗೋಳಿಕ ಮತ್ತು ಆಡಳಿತಾತ್ಮಕ ಅಗತ್ಯತೆಗಳ ಜೊತೆಗೆ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಸಹ ಅವಲಂಬಿಸಿರುತ್ತದೆ. ಅಲ್ಲದೆ ಆರ್ಥಿಕ ಇಲಾಖೆಯೂ ಸಹ ಇಂತಹ ಪ್ರಸ್ತಾವನೆಗೆ ಸಹಮತಿ ನೀಡಬೇಕಾ ಗಿರುತ್ತದೆ. ತುರ್ತಾಗಿ ರಾಜ್ಯದಲ್ಲಿ ಹೊಸದಾಗಿ ಹೋಬಳಿಗಳನ್ನು ರಚಿಸಲು ಸರ್ಕಾರವು ಯಾವುದೇ ತಾತ್ವಿಕ ನಿರ್ಣಯ ಕೈಗೊಂಡಿರುವುದಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದರು.
ಶಂಕರನಾರಾಯಣ ಹೋಬಳಿ ರಚನೆಯಾದರೆ ಗ್ರಾಮೀಣ ಭಾಗದ ಜನ ಸಾಮಾನ್ಯರಿಗೆ ಸಾಕಷ್ಟು ಅನುಕೂಲವಾಗಲಿದೆ. ಸರಕಾರ ಇದನ್ನು ಆದ್ಯತೆ ಮೇರೆಗೆ ಮಾಡುವಂತೆ ಆಗಲಿ ಎಂಬ ಅಭಿಪ್ರಾಯ ಶಾಸಕರು ವ್ಯಕ್ತಪಡಿಸಿದರು.










