ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಇಲ್ಲಿನ ಹಿಂದು ಜಾಗರಣ ವೇದಿಕೆ ಇದರ ಆಶ್ರಯದಲ್ಲಿ ಅಖಂಡ ಭಾರತ ಸಂಕಲ್ಪ ದಿನ ಮತ್ತು ಪಂಜಿನ ಮೆರವಣಿಗೆ ಗಂಗೊಳ್ಳಿಯಲ್ಲಿ ಗುರುವಾರ ಸಂಜೆ ನಡೆಯಿತು.
ಗಂಗೊಳ್ಳಿ ಶ್ರೀ ವೀರೇಶ ಮಾಂಗಲ್ಯ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ವಿಜಯ ಕೊಡವೂರು ದಿಕ್ಸೂಚಿ ಭಾಷಣ ಮಾಡಿ, ಈ ಹಿಂದಿನ ಕಹಿ ನೆನಪುಗಳನ್ನು ಮುಂದಿನ ಪೀಳಿಗೆಗೆ ಕೊಡಬೇಕು, ನೆನಪಿಡಬೇಕು ಮತ್ತು ಜಾಗೃತರಾಗಿರಬೇಕು ಎಂಬ ಉದ್ದೇಶದಿಂದ ಪ್ರತಿ ವರ್ಷ ಅಖಂಡ ಭಾರತ ಸಂಕಲ್ಪ ಕಾರ್ಯಕ್ರಮವನ್ನು ಮಾಡುತ್ತಾ ಬಂದಿದ್ದೇವೆ. ತುಂಡಾಗಿರುವ ಹಿಂದುಗಳನ್ನು ಮತ್ತೆ ಜೋಡಿಸಬೇಕು, ತುಂಡಾಗಿರುವ ಭೂಪ್ರದೇಶವನ್ನು ಮತ್ತೆ ಜೋಡಿಸಬೇಕು, ನೆನಪು ಹೋಗಿರುವ ಹಿಂದುಗಳನ್ನು ಮತ್ತೆ ಸೇರಿಸಬೇಕು, ನಿದ್ರೆಯಲ್ಲಿರುವ ಹಿಂದುಗಳನ್ನು ಮತ್ತೆ ನೆನಪು ಮಾಡಿಸಿ ಜಾಗೃತಿ ಮಾಡಿಸಬೇಕು, ನೋವುಂಡ ಹಿಂದುಗಳನ್ನು ಮತ್ತೆ ಜಾಗೃತಿ ಮಾಡಬೇಕು ಎಂಬ ಉದ್ದೇಶ ಈ ಕಾರ್ಯಕ್ರಮದ ಹಿಂದಿದೆ ಎಂದು ಹೇಳಿದರು.
ನಮ್ಮ ದೇಶದ ಮೇಲೆ ಅದೆಷ್ಟೋ ಅಕ್ರಮಣಗಳು ನಡೆದಿದ್ದರೂ, ದೇವಸ್ಥಾನದ ವಿಗ್ರಹಗಳನ್ನು ಭಗ್ನ ಮಾಡಿದ್ದರೂ, ಅತ್ಯಾಚಾರಗಳು ನಡೆದಿದ್ದರೂ, ಸಾವಿರ ಸಾವಿರ ಜನರನ್ನು ಆದರೂ ನಮ್ಮ ದೇಶ ಸಶಕ್ತವಾಗಿ, ಧೈರ್ಯವಾಗಿ ನಿಂತಿದೆ. ಮುಸಲ್ಮಾನರ ಆಳ್ವಿಕೆ, ಮುಸಲ್ಮಾನರ ದಬ್ಬಾಳಿಕೆಯಿಂದ ಭಾರತ ತುಂಡು ತುಂಡಾಗಿ ಹೋಗಿದೆ. ಭವಿಷ್ಯದಲ್ಲಿ ಆದ ತಪ್ಪುಗಳು ಮುಂದಿನ ದಿನಗಳಲ್ಲಿ ಆಗಬಾರದು ಎಂದಾದರೆ ನಮ್ಮ ಸ್ವಾತಂತ್ರ್ಯದ ಇತಿಹಾಸ ಅಧ್ಯಯನ ಮಾಡಬೇಕಿದೆ. ಹಿಂದು ಸಮಾಜ ಜಾಗೃತಗೊಳ್ಳಬೇಕಿದೆ. ಪ್ರತಿಯೊಬ್ಬರಲ್ಲೂ ದೇಶ ಭಕ್ತಿಯ ಪರಿಕಲ್ಪನೆ ಬೆಳೆಯಬೇಕಿದೆ ಎಂದರು.
ವಾಯುಸೇನೆಯ ನಿವೃತ್ತ ಯೋಧ ಟಿ. ದಿನಕರ ಶೆಣೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿಂದು ಜಾಗರಣ ವೇದಿಕೆ ಜಿಲ್ಲಾ ಪ್ರಮುಖ್ ವಾಸುದೇವ ದೇವಾಡಿಗ, ಗಂಗೊಳ್ಳಿ ಶ್ರೀ ಇಂದುಧರ ದೇವಸ್ಥಾನದ ಅಧ್ಯಕ್ಷ ಗುರುರಾಜ್ ಉಪಸ್ಥಿತರಿದ್ದರು. ಗಂಗೊಳ್ಳಿಯ ಶ್ರೀ ಇಂದುಧರ ದೇವಸ್ಥಾನದ ಬಳಿಯಿಂದ ಪ್ರಾರಂಭವಾದ ಪಂಜಿನ ಮೆರವಣಿಗೆ ಮುಖ್ಯ ರಸ್ತೆ ಮೂಲಕ ಮೇಲ್‌ಗಂಗೊಳ್ಳಿಯ ಶ್ರೀ ರಾಮ ಮಂದಿರದ ತನಕ ಸಾಗಿ ಶ್ರೀ ವೀರೇಶ್ವರ ದೇವಸ್ಥಾನದ ಬಳಿ ಸಮಾಪನಗೊಂಡಿತು.
ಹಿಂದು ಜಾಗರಣ ವೇದಿಕೆ ಗಂಗೊಳ್ಳಿ ಘಟಕದ ಸಂಚಾಲಕ ಯಶವಂತ ಖಾರ್ವಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ತಿಕ್ ಖಾರ್ವಿ ಪ್ರತಿಜ್ಞಾವಿಧಿ ಬೋಧಿಸಿದರು. ಕುಂದಾಪುರ ಡಿವೈಎಸ್‌ಪಿ ಬೆಳ್ಳಿಯಪ್ಪ ಮಾರ್ಗದರ್ಶನದಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಪವನ್ ನಾಯಕ್ ಮತ್ತು ವಿವಿಧ ಠಾಣೆಯ ಉಪನಿರೀಕ್ಷಕರ ನೇತೃತ್ವದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.















