ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯು 2024-2025ನೇ ಸಾಲಿನಲ್ಲಿ 1.14 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ. 17 ಪಾಲು ಮುನಾಫೆ ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ. ಸಹಕಾರಿಯು 3832 ಸದಸ್ಯರನ್ನು ಹೊಂದಿದ್ದು, ಸಹಕಾರಿಯ ದುಡಿಯುವ ಬಂಡವಾಳ 100.80 ಕೋಟಿ ರೂ. ಮತ್ತು 85.56 ಕೋಟಿ ರೂ. ಠೇವಣಿ ಹೊಂದಿದೆ. 24.54 ಕೋಟಿ. ರೂ.ಗಳನ್ನು ವಿವಿಧ ಬ್ಯಾಂಕುಗಳಲ್ಲಿ ಹೂಡಿಕೆ ಮಾಡಲಾಗಿದೆ. ಎಂದು ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯ ಅಧ್ಯಕ್ಷ ಜಿ. ವೆಂಕಟೇಶ ಶೆಣೈ ಹೇಳಿದರು.
ಅವರು ಗಂಗೊಳ್ಳಿಯ ಶ್ರೀ ವೀರ ವಿಠಲ ಸಭಾಗೃಹದಲ್ಲಿ ಭಾನುವಾರ ಜರಗಿದ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯ 105ನೇ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತ್ವರಿತ ಹಾಗೂ ಉತ್ಕೃಷ್ಟ ದರ್ಜೆಯ ಗ್ರಾಹಕ ಸೇವೆಯನ್ನು ನೀಡಲು ಮತ್ತು ಸದಸ್ಯರಿಗೆ ನಗದು ರಹಿತ ವ್ಯವಹಾರ ನಡೆಸಲು ಸಹಕಾರಿಯು ಶ್ರಮಿಸುತ್ತಿದೆ. 2025-26ನೇ ಸಾಲಿನಲ್ಲಿ ಕೈಗೊಳ್ಳಬಹುದಾದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಆಡಳಿತ ಮಂಡಳಿ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದು ಅವುಗಳನ್ನು ಹಂತ ಹಂತವಾಗಿ ಕಾರ್ಯಗತಗೊಳಿಸುವಲ್ಲಿ ಶ್ರಮಿಸುತ್ತಿದೆ. ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯ ಸದಸ್ಯರು ಸಂಸ್ಥೆಯ ಮೇಲಿಟ್ಟಿರುವ ವಿಶ್ವಾಸವೇ ಸಹಕಾರಿಯ ಅಭಿವೃದ್ಧಿಗೆ ಕಾರಣ ಎಂದು ಅವರು ಹೇಳಿದರು.
ಸಹಕಾರಿಯ ಉಪಾಧ್ಯಕ್ಷ ಜಿ.ವಿಶ್ವನಾಥ ಆಚಾರ್ಯ, ನಿರ್ದೇಶಕರಾದ ಎನ್.ಮಾಧವ ಕಿಣಿ, ಬಿ. ರಾಘವೇಂದ್ರ ಪೈ, ಜಿ.ವೇದವ್ಯಾಸ ಆಚಾರ್ಯ, ನಾಗಪ್ರಸಾದ್ ಪೈ ಎಂ.ಜಿ., ಮಾಲಾ ಕೆ.ನಾಯಕ್, ಗೀತಾ ಜಿ.ನಾಯಕ್, ಮಹಾಬಲ ಪೂಜಾರಿ, ಕಿರಣ್ ಫಿಲಿಪ್ ಪಿಂಟೋ, ಜಿ.ವೆಂಕಟೇಶ ನಾಯಕ್, ಯು. ವಿಷ್ಣು ಪಡಿಯಾರ್ ಉಪಸ್ಥಿತರಿದ್ದರು.
ಇದೇ ಸಂದರ್ಭ ಸಹಕಾರಿಯ ಮಾಜಿ ಅಧ್ಯಕ್ಷ ಎಂ. ಮಧುಕರ ಪೈ, ಮಾಜಿ ನಿರ್ದೇಶಕ ಡಾ. ಕಾಶೀನಾಥ ಪೈ, ಸದಸ್ಯ ಸುದನೇಶ ಶ್ಯಾನುಭಾಗ್, ಚಿನ್ನಾಭರಣ ಪರೀಕ್ಷಕ ಜಿ.ಉದಯ ಕುಮಾರ್ ಶೇಟ್, ಉಪ್ಪುಂದ ಶಾಖಾಧಿಕಾರಿ ರಾಜೇಶ ಪ್ರಭು, ಹಿರಿಯ ಸಹಾಯಕ ಗಿರೀಶ್ ಶ್ಯಾನುಭಾಗ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಹಕಾರಿಯ ನಿರ್ದೇಶಕ ಎಸ್.ವೆಂಕಟರಮಣ ಆಚಾರ್ಯ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಣೇಶ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು. ನಿರ್ದೇಶಕ ಕೆ.ಪರಮೇಶ್ವರ ನಾಯಕ್ ವಂದಿಸಿದರು.















