ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ದಕ್ಷಿಣ ಭಾರತದ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ದೇಶದ ಖ್ಯಾತ ಹಿನ್ನಲೆ ಸಂಗೀತ ನಿರ್ದೇಶಕ ಇಳಯರಾಜ್ ಅವರು ದೇವರಿಗೆ ಸುಮಾರು ರೂ. 4 ಕೋಟಿ ಮೌಲ್ಯದ ವಜ್ರ ಖಚಿತ ಕಿರೀಟ ಸಹಿತ ಆಭರಣಗಳು ಹಾಗೂ ವೀರಭದ್ರ ದೇವರಿಗೆ ರಜತ ಕಿರೀಟ ಸಹಿತ ಖಡ್ಗವನ್ನು ಸೇವಾ ರೂಪದಲ್ಲಿ ಸಮರ್ಪಿಸಿದರು.
ಅವರು ಈ ಹಿಂದೆಯೂ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ಬೆಲೆಬಾಳುವ ವಜ್ರದ ಕಿರೀಟ ಸೇರಿದಂತೆ ಹಲವು ವಸ್ತುಗಳನ್ನು ಕೊಡುಗೆಯಾಗಿ ನೀಡಿದ್ದರು.

ದೇವಳದ ಅರ್ಚಕ ಶ್ರೀಧರ ಅಡಿಗ ಅವರ ನೇತೃತ್ವದಲ್ಲಿ ಸಮರ್ಪಣೆ ಕಾರ್ಯದ ಧಾರ್ಮಿಕ ವಿವಿಧಾನ ನಡೆಯಿತು. ವಜ್ರಕಿರೀಟ ಸಹಿತ ಆಭರಣಗಳನ್ನು ಕೊಲ್ಲೂರು ದೇವಳದ ಓಲಗಮಂಟದಿಂದ ವೈಭವದ ಮೆರವಣೆಗೆಯ ಮೂಲಕ ದೇಗುಲಕ್ಕೆ ಬರಮಾಡಿಕೊಳ್ಳಲಾಯಿತು. ಈ ಸಂದರ್ಭ ಇಳಯರಾಜ್ ಕುಟುಂಬದವರನ್ನು ದೇಗುಲದ ಆಡಳಿತ ಮಂಡಳಿಯ ವತಿಯಿಂದ ಗೌರವಿಸಲಾಯಿತು.

ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಾಬು ಶೆಟ್ಟಿ, ಸದಸ್ಯರಾದ ಮಹಾಲಿಂಗ ನಾಯ್ಕ, ರಘುರಾಮ ದೇವಾಡಿಗ, ಧನಾಕ್ಷಿ, ಸುಧಾ ಕೆ., ಮಾಜಿ ಸದಸ್ಯ ವಂಡಬಳ್ಳಿ ಜಯರಾಮ ಶೆಟ್ಟಿ, ದೇವಾಲಯದ ಕಾರ್ಯನಿರ್ವಹಣಾಕಾರಿ ಪ್ರಶಾಂತ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವರ ಪರಮಭಕ್ತರಾದ ಇಳಯರಾಜ್ ಅವರು ಈ ಹಿಂದೆಯೂ ಹಲವು ಬೆಲೆಬಾಳುವ ಆಭರಣಗಳನ್ನು ಸೇವಾರೂಪದಲ್ಲಿ ದೇಗುಲಕ್ಕೆ ಸಮರ್ಪಿಸಿದ್ದರು. ರಾಷ್ಟ್ರೀಯವಾಗಿ ಎಲ್ಲರಿಗೂ ಒಳಿತಾಗಲಿ ಎಂಬ ವ್ಯಾಪಕ ಭಾವನೆಯಿಂದ ಅವರು ಈಗ ಮತ್ತಷ್ಟು ಬೆಲೆಬಾಳುವ ಆಭರಣಗಳನ್ನು ಸಮರ್ಪಿಸಿದ್ದಾರೆ. ಈ ಕಾರ್ಯದಿಂದ ದೇವರು ಸಂತುಷ್ಠರಾಗಿ, ದೇಶ ಸಂಪದ್ಭರಿತವಾಗಿ ಜನ ನೆಮ್ಮದಿಯ ಜೀವನ ನಡೆಸಲಿ ಎಂಬ ಭಾವನೆಯಿಂದ ಅವರು ಈ ಕಾರ್ಯ ಮಾಡಿದ್ದಾರೆ – ಶ್ರೀಧರ ಅಡಿಗ ದೇವಳದ ಅರ್ಚಕ















