ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ತೂದಳ್ಳಿ ಸಮೀಪದ ದೇವರುಗದ್ದೆಯಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸದ ವಿಚಾರಕ್ಕೆ ಸಂಬಂಧಿಸಿದಂತೆ ಕುಡಿದ ಮತ್ತಿನಲ್ಲಿ ಇಬ್ಬರು ಕೆಲಸಗಾರರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡಿದೆ. ಕೇರಳದ ಬಿನು ಪಿಲಿಫ್ (45) ಮೃತ ವ್ಯಕ್ತಿಯಾಗಿದ್ದು ಚೂರಿ ಇರಿತದಿಂದ ಗಾಯಗೊಂಡು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಉದಯ ಕುಮಾರ್ (42) ಕೊಲೆ ಆರೋಪಿ.
ಯಡ್ತರೆ ಗ್ರಾಮದ ಕೊಸಳ್ಳಿ ಸಮೀಪದ ದೇವರಗದ್ದೆಯಲ್ಲಿ ಕೇರಳದ ಬಿನು ಪಿಲಿಫ್ ಹಾಗೂ ಉದಯ ಕುಮಾರ್ ಇಬ್ಬರು ಕಳೆದ ಎರಡು ವರ್ಷಗಳಿಂದ ಥೋಮಸ್ ಎಂಬುವವರ ತೋಟದಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡಿಕೊಂಡಿದ್ದು ಕೂಲಿ ಹಣದ ವಿಚಾರದಲ್ಲಿ ಪರಸ್ಪರ ಜಗಳ ಮಾಡಿಕೊಳ್ಳುತ್ತಿದ್ದರು. ಉದಯ ಎಂಬಾತ ತಾನೋಬ್ಬನೇ ಇಲ್ಲಿ ಕೆಲಸ ಮಾಡುತ್ತೇನೆ ನೀನು ಊರಿಗೆ ಹೋಗು ಎಂದು ಬಿನು ಪಿಲಿಫ್ ಬಳಿ ಹೇಳುತ್ತಲೇ ಬಂದಿದ್ದ. ತೋಟದ ಮಾಲೀಕ ಥೋಮಸ್ ಇಬ್ಬರನ್ನು ಹೊಂದಿಕೊಂಡು ಕೆಲಸ ಮಾಡಿಕೊಂಡಿರುವಂತೆ ಸೂಚಿಸಿದ್ದರು. ಶನಿವಾರ ರಾತ್ರಿ 12ಗಂಟೆಯ ವೇಳೆಗೆ ತೋಟದಲ್ಲಿರುವ ಶೆಡ್ಡಿನಲ್ಲಿ ಈ ಇಬ್ಬರು ಕೆಲಸಗಾರರು ಜಗಳ ಮಾಡಿಕೊಳ್ಳುತ್ತಿರುವ ಬಗ್ಗೆ ತಿಳಿದು ಥೋಮಸ್ ಅವರ ಮಗ ನವೀನ್ ತೋಟಕ್ಕೆ ತೆರಳಿದ್ದಾನೆ. ಈ ವೇಳೆ ಗಲಾಟೆ ಮಾಡಿಕೊಳ್ಳುತ್ತಿದ್ದ ಉದಯ್ ರಬ್ಬರ್ ಟ್ಯಾಪಿಂಗ್ ಚೂರಿಯಿಂದ ಪಿಲಿಫ್ʼಗೆ ಇರಿದು ಪರಾರಿಯಾಗಿದ್ದ. ತಕ್ಷಣ ಅತನನ್ನು ಬೈಂದೂರು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಭಾನುವಾರ ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ. ಆರೋಪಿ ಉದಯಗೆ ಕೂಡ ಹಲ್ಲೆಯಾಗಿದ್ದು ಆತನಿಗೆ ಬಂಧಿಸಿ ಚಿಕಿತ್ಸೆ ನೀಡಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ.
ಘಟನಾ ಸ್ಥಳಕ್ಕೆ ಕುಂದಾಪುರ ಡಿ.ಎಸ್.ಪಿ. ಎಚ್.ಡಿ ಕುಲಕರ್ಣಿ ಮತ್ತು ಬೈಂದೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










