ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಪಂಚ ಗ್ಯಾರೆಂಟಿಯಲ್ಲಿ ಮಹಿಳೆಯನ್ನು ಕೇಂದ್ರಿಕರಿಸಿ ಯೋಜನೆಯನ್ನು ರೂಪಿಸಲಾಗಿದ್ದು, ಮಹಿಳೆಯರ ನಿರಂತರ ಶ್ರಮಕ್ಕೆ ಮಾನ್ಯತೆ ನೀಡುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡಿದೆ ಉಡುಪಿ ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹೇಳಿದರು.

ಅವರು ಗುರುವಾರ ಶಿರೂರು ಪೇಟೆ ವೆಂಕಟರಮಣ ದೇವಸ್ಥಾನದ ಸಭಾಭವನದಲ್ಲಿ ತಾಲೂಕು ಪಂಚಾಯತ್ ಬೈಂದೂರು, ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಬೈಂದೂರು ಹಾಗೂ ಗ್ರಾಮ ಪಂಚಾಯತ್ ಶಿರೂರು ನೇತೃತ್ವದಲ್ಲಿ ಆಯೋಜಿಸಲಾದ ಗ್ಯಾರೆಂಟಿ ಸಮಾವೇಶ ಹಾಗೂ ಅದಾಲತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ಯಾರೆಂಟಿ ಯೋಜನೆಯಿಂದ ರಾಜ್ಯದ ಯಾವೊಂದು ಕಲ್ಯಾಣ ಕಾರ್ಯಕ್ರಮಗಳಿಗೂ ಹಿನ್ನಡೆಯಾಗಿಲ್ಲ. ಕಾಲಕಾಲಕ್ಕೆ ಸರಕಾರ ಅಭಿವೃದ್ಧಿಗೆ ಅನುದಾನ ನೀಡುತ್ತಿದೆ. ಅಲ್ಲದೇ ಗ್ಯಾರೆಂಟಿ ಯೋಜನೆಯಿಂದಾಗಿ ತಲಾ ಆದಾಯವೂ ಪ್ರಗತಿ ಕಂಡಿದ್ದು, ಜನರ ಆರ್ಥಿಕ ವಹಿವಾಟು ಹೆಚ್ಚಿದೆ ಎಂದರು.

ಬೈಂದೂರು ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮೋಹನ್ ಪೂಜಾರಿ ಉಪ್ಪುಂದ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ಕ್ಷೇತ್ರ ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷರು ಹಾಗೂ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಜಿಲ್ಲಾ ಗ್ಯಾರೆಂಟಿ ಸಮಿತಿ ಸದಸ್ಯ ಅರವಿಂದ ಪೂಜಾರಿ, ಶಿರೂರು ಗ್ರಾ.ಪಂ ಅಧ್ಯಕ್ಷೆ ನಾಗರತ್ನ ಆಚಾರ್ಯ, ಉಪಾಧ್ಯಕ್ಷ ನೂರ್ ಮೊಹಮ್ಮದ್, ತಾ.ಪಂ. ಇಓ ರಾಜಕುಮಾರ್, ಗ್ಯಾರೆಂಟಿ ಸಮಿತಿ ಸದಸ್ಯರು, ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.


ಗ್ಯಾರೆಂಟಿ ಅಧ್ಯಕ್ಷ ಮೋಹನ್ ಪೂಜಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗಣೇಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.
















