ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ನಿವೃತ್ತ ಶಿಕ್ಷಕರ ಬದುಕು ಹಾಗೂ ಅವರ ಶೈಕ್ಷಣಿಕ ಜೀವನ ತಳಹದಿ ಶ್ರೇಷ್ಠವಾದದ್ದು, ಆದರೆ ಅವರ ನಿವೃತ್ತಿಯ ನಂತರ ದಿನಗಳಲ್ಲಿ ಗುರುತಿಸುವ ಕಾಯಕ ಶೈಕ್ಷಣಿಕ ಬದುಕಿನ ಸಾರ್ಥಕತೆಯ ಕ್ಷಣಕ್ಕೆ ಸಾಕ್ಷಿಯಾಗಿದೆ ಎಂದು ಕೋಟದ ವಿವೇಕ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಕೆ. ಜಗದೀಶ್ ನಾವಡ ಹೇಳಿದರು.
ಅವರು ಭಾನುವಾರ ಡಾ. ಕೋಟ ಶಿವರಾಮ ಕಾರಂತ ಮಕ್ಕಳ ವೇದಿಕೆ, ಸಾಲಿಗ್ರಾಮ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಘಟಕ ಗೀತಾನಂದ ಫೌಂಡೇಶನ್, ಕೋಟ-ಮಣೂರು, ಕೋಟ ವಿದ್ಯಾ ಸಂಘ ಕೋಟ ಸಹಯೋಗದಲ್ಲಿ ನಿವೃತ್ತ ಶಿಕ್ಷಕರ ಸಾಹಿತ್ಯಕ ಸಮಾವೇಶ ಮತ್ತು ಗುರುವಂದನೆ ಕಾರ್ಯಕ್ರಮದಲ್ಲಿ ಅಭಿನಂದನಾ ನುಡಿಗಳನ್ನಾಡಿ ಮಾತನಾಡಿದರು.
ಸಂಘಟನೆ ಮೂಲಕ ನಿವೃತ್ತಿಯ ಬದುಕಿಗೆ ನೆಮ್ಮದಿ ವಾತಾವರಣ ಕಲ್ಪಿಸಲಿದೆ ಹಾಗೂ ನಿವೃತ್ತಿ ಬದುಕಿನಲ್ಲಿ ಸಮಾನ ಮನಸ್ಕರೊಂದಿಗೆ ಸತ್ಚಿಂತನೆಯ ಜೊತೆಗೆ ವಿಚಾರ ವಿನಿಮಯಕ್ಕೆ ವೇದಿಕೆ ಅಗತ್ಯ, ಅದು ನಮ್ಮ ಆರೋಗ್ಯಕರ ಬದುಕಿಗೆ ಮುನ್ನುಡಿ ಬರೆಯಲಿದೆ ಎಂದರು.
ಈ ಸಂದರ್ಭದಲ್ಲಿ ಇತ್ತೀಚಿಗೆ ನಿವೃತ್ತರಾದ ಮಂಜುನಾಥ್ ಉಪಾಧ್ಯಾಯ,ಜಗದೀಶ್ ಹೊಳ್ಳ,ರಮೇಶ್ ನಕ್ಷತ್ರಿ,ಪ್ರಭಾಕರ ಕಾಮತ್ ಇವರುಗಳನ್ನು ಸನ್ಮಾನಿಸಲಾಯಿತು.
ನಿವೃತ್ತ ಹಿರಿಯ ಶಿಕ್ಷಕರಾದ ರಾಮಕೃಷ್ಣ ಉಪಾಧ್ಯಾಯ, ಆನಂದರಾಮ ವಾಕುಡ, ರಾಮದೇವ ಹಂದೆ, ಮಹಾಬಲೇಶ್ವರ ಉರಾಳ, ರಂಗಯ್ಯ ಅಡಿಗ, ರಂಗಪ್ಪಯ್ಯ ಹೊಳ್ಳ, ಸೂರ್ಯನಾರಾಯಣ ಹೇರ್ಳೆ, ರಾಘವೇಂದ್ರ ಭಟ್ ಅವರುಗಳನ್ನು ಗುರುತಿಸಿ ಗೌರವಿಸಲಾಯಿತು.
ಸಭೆಯಲ್ಲಿ ಕುಂದಾಪುರ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಜಿ. ನಾಗೇಶ್ ಆರೋಗ್ಯದ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು. ಇದೇ ವೇಳೆ ಡಾ.ನಾಗೇಶ್ ಅವರನ್ನು ಗೌರವಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಡಾ. ಕೋಟ ಶಿವರಾಮ ಕಾರಂತ ಮಕ್ಕಳ ವೇದಿಕೆಯ ಅಧ್ಯಕ್ಷ ಸಿ. ಉಪೇಂದ್ರ ಸೋಮಯಾಜಿ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ಪಿ. ನರಸಿಂಹ ಐತಾಳ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ನಿವೃತ್ತ ಮುಖ್ಯ ಶಿಕ್ಷಕ ನಾಗೇಶ್ ಮಯ್ಯ ನಿರೂಪಿಸಿ, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ನಿಲಾವರ ಸುರೇಂದ್ರ ಅಡಿಗ ಸ್ವಾಗತಿಸಿ, ನಿವೃತ್ತ ಶಿಕ್ಷಕ ಶ್ರೀಪತಿ ಹೇರ್ಳೇ ವಂದಿಸಿದರು.















