ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಸೆ.23: ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ವಿಧಾನಸಭಾ ಕ್ಷೇತ್ರ ಚುನಾವಣೆಯಿಂದ ಆರಂಭಗೊಂಡ ಶಾಸಕರಾದ ಗುರುರಾಜ ಗಂಟಿಹೊಳೆ ಹಾಗೂ ಅಂದಿನ ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷರಾಗಿದ್ದ ದೀಪಕ್ ಕುಮಾರ್ ಶೆಟ್ಟಿ ಅವರ ನಡುವಿನ ಮುಸುಕಿನ ಗುದ್ದಾಟ ಮುಂದುವರಿದಿದ್ದು, ಇಂದು ಉಡುಪಿಯಲ್ಲಿ ದಿಶಾ ಸಭೆಯಲ್ಲಿ ಭಾಗವಹಿಸಲು ಬಂದಿದ್ದ ಸಂಸದ ಬಿ.ವೈ. ರಾಘವೇಂದ್ರ ಅವರ ಎದುರೆ ಪರಸ್ಪರ ಮಾತಿನ ಚಕಮಕಿ – ತಳ್ಳಾಡಿಕೊಂಡ ಘಟನೆ ನಡೆದಿದೆ.
ಬಿಜೆಪಿ ಪಕ್ಷದಲ್ಲಿ ಬಣ ರಾಜಕೀಯ ಇಲ್ಲ ಎನ್ನುತ್ತಲೇ ಪರಸ್ಪರ ಬಣಗಳಾಗಿ ಮುಂದುವರಿಯುತ್ತಿದ್ದ ಶಾಸಕರಾದ ಗುರುರಾಜ ಗಂಟಿಹೊಳೆ ಹಾಗೂ ಬೈಂದೂರು ಬಿಜೆಪಿ ಮಾಜಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಅವರು ನಡುವಿನ ಮಾತಿನ ಚಕಮಕಿ ಜೋರಾಗಿಯೇ ನಡೆದಿದೆ. ತೆರೆಮರೆಯಲ್ಲಿ ನಡೆಯುತ್ತಿದ್ದ ಪರಸ್ಪರರ ಕಸರತ್ತು ಇಂದು ಸಂಸದರು, ಬಿಜೆಪಿ ಜಿಲ್ಲಾಧ್ಯಕ್ಷರು ಹಾಗೂ ಕುಂದಾಪುರ ಕ್ಷೇತ್ರದ ಶಾಸಕರ ಎದುರೇ ಬಟಾಬಯಲಾಗಿದೆ. ದಿಶಾ ಸಭೆಯಲ್ಲಿ ಭಾಗವಹಿಸುವ ಮುನ್ನ ಉಡುಪಿಯ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ನಾಯಕರು ಮಾತನಾಡುತ್ತಾ ಕುಳಿತಿದ್ದ ವೇಳೆ ಈ ಘಟನೆ ನಡೆದಿದೆ. ಸಂಸದರ ಎದುರು ಪರಸ್ಪರ ಆರೋಪ – ಪ್ರತ್ಯಾರೋಪ ಮಾಡಿದ್ದಾರೆ. ಪರಿಸ್ಥಿತಿ ಕೈಮೀರಿ ಶಾಸಕ ಗುರುರಾಜ ಗಂಟಿಹೊಳೆ ಹಾಗೂ ದೀಪಕ್ ಕುಮಾರ್ ಶೆಟ್ಟಿ ಅವರ ನಡುವೆ ತಳ್ಳಾಟ ನಡೆದಿದೆ. ಮಧ್ಯ ಪ್ರವೇಶಿಸಿದ ಕುಂದಾಪುರ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಹಾಗೂ ಸಂಸದರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
ಬೈಂದೂರು ಪಟ್ಟಣ ಪಂಚಾಯತಿಯಿಂದ ಗ್ರಾಮೀಣ ಪ್ರದೇಶಗಳನ್ನು ಕೈಬಿಡುವಂತೆ ದೀಪಕ್ ಕುಮಾರ್ ಶೆಟ್ಟಿ ಅವರು ರೈತ ಸಂಘದ ಮೂಲಕ ಹೋರಾಟ ನಡೆಸುತ್ತಿದ್ದು ಜನರಿಂದಲೂ ಸ್ಪಂದನೆ ವ್ಯಕ್ತವಾಗಿದೆ. ಈ ಮೊದಲೇ ಶಾಸಕರು ಕೂಡ ಗ್ರಾಮೀಣ ಪ್ರದೇಶಗಳನ್ನು ಕೈಬಿಡುವಂತೆ ಸರಕಾರಕ್ಕೆ ಪತ್ರ ಬರೆದು, ಜಿಲ್ಲಾಧಿಕಾರಿಗಳಿಗೂ ಮನವಿ ಮಾಡಿದ್ದರು. ಇದೇ ವಿಚಾರಕ್ಕೆ ಗಲಾಟೆ ನಡೆದಿದೆ ಎನ್ನಲಾಗಿದೆಯಾದರೂ ಇಬ್ಬರೂ ಆರಂಭದಿಂದಲೇ ಪರಸ್ಪರ ದೂರು ಹೇಳಿಕೊಂಡೇ ಬಂದಿದ್ದು, ಅದೇ ಅಸಮಾಧಾನ ಇದೀಗ ಬಹಿರಂಗಗೊಂಡಿದೆ ಎನ್ನಲಾಗಿದೆ.
ಘಟನೆಯ ಬಗ್ಗೆ ಶಾಸಕ ಗುರುರಾಜ ಗಂಟಿಹೊಳೆ ಅವರು ಪ್ರತಿಕ್ರಿಯಿಸಿ ಬೈಂದೂರು ಪಟ್ಟಣ ಪಂಚಾಯತಿಯನ್ನು ವಿಸರ್ಜಿಸುವಂತೆ ಸಾರ್ವಜನಿಕರು ಕೇಳಿಕೊಂಡಿದ್ದಾರೆ. ಕೆಲವರು ಗ್ರಾಮೀಣ ಪ್ರದೇಶಗಳನ್ನಷ್ಟೇ ವಿರಹಿತಗೊಳಿಸಿ ನಗರ ಪ್ರದೇಶವನ್ನು ಒಳಗೊಂಡು ಪಟ್ಟಣ ಪಂಚಾಯತಿಯನ್ನು ಉಳಿಕೊಳ್ಳುವಂತೆ ಕೇಳಿಕೊಂಡಿದ್ದಾರೆ. ಸಾರ್ವಜನಿಕರ ಅಭಿಪ್ರಾಯದಂತೆ ಸರಕಾರಕ್ಕೆ ಪತ್ರ ಬರೆಯಾಗಿದೆ. ಜಿಲ್ಲಾಧಿಕಾರಿಗಳೂ ಸರಕಾರಕ್ಕೆ ಕಳುಹಿಸಿದ ಪ್ರಸ್ತಾವನೆ ತಿರಸ್ಕೃತವಾಗಿರುವುದರಿಂದ ಮುಂದಿನ ನಡೆಯ ಬಗ್ಗೆ ಚಿಂತಿಸಿ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ. ಬೈಂದೂರು ಬಿಜೆಪಿ ಕಾರ್ಯಕರ್ತರ ಪಕ್ಷ. ಇಲ್ಲಿ ನಾಯಕರ ಮಾತಿಗಿಂತ ಹೆಚ್ಚಾಗಿ ಕಾರ್ಯಕರ್ತರ ಮಾತು ನಡೆಯುತ್ತದೆ ಎಂದು ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
- ಕಳೆದ ಭಾರಿ ರಾಜ್ಯದಲ್ಲಿ ಬಿಜೆಪಿ ಸರಕಾರ ಇರುವಾಗ ಜನರ ಅಪೇಕ್ಷೆಯ ಮೇರೆಗೆ ಬೈಂದೂರು ಪಟ್ಟಣ ಪಂಚಾಯತಿ ರಚಿಸಲಾಗಿತ್ತು. ತಾಲೂಕು ಕೇಂದ್ರವು ಗ್ರಾಮವಾಗಿ ಉಳಿಯಬಾರದು ಮತ್ತು ಅಭಿವೃದ್ಧಿಗೆ ಹೆಚ್ಚಿನ ಅನುದಾನ ದೊರೆಯಲಿ ಎಂಬ ಆಶಯದಿಂದ ಅದನ್ನು ರಚಿಸಲಾಗಿತ್ತು. ಆದರೆ ಈಗ ಜನರಿಗೆ ಅದರಿಂದ ಸಮಸ್ಯೆಯಾಗುವುದಾದರೆ ನಾನು ಅವರ ಪರ ನಿಲ್ಲುತ್ತೇನೆ. ಗ್ರಾಮೀಣ ಪ್ರದೇಶಗಳನ್ನು ಕೈಬಿಡಲು ಅಥವಾ ಪಟ್ಟಣ ಪಂಚಾಯತಿಯನ್ನು ವಿಸರ್ಜಿಸಲು ಸರಕಾರಕ್ಕೆ ಮನವಿ ಮಾಡುತ್ತೇನೆ. – ಬಿ.ವೈ. ರಾಘವೇಂದ್ರ ಸಂಸದರು










