ಸದಸ್ಯರ ವಿಶ್ವಾಸವೇ ಸಂಸ್ಥೆಯ ಯಶಸ್ಸು – ಎಚ್. ಜಯಶೀಲ ಶೆಟ್ಟಿ
ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಊರಿನ ಜನರ ಆರ್ಥಿಕ ಅಗತ್ಯತೆಗಳಿಗೆ ಪೂರಕವಾಗಿ ಸಹಕಾರಿ ಸಂಸ್ಥೆಯನ್ನು ಆರಂಭಿಸಲಾಗಿದೆ. ಠೇವಣಿದಾರರ ವಿಶ್ವಾಸ ಹಾಗೂ ಪ್ರತಿ ಗ್ರಾಹಕರ ಮನಗೆಲ್ಲುವಲ್ಲಿ ಸಂಸ್ಥೆ ಯಶಸ್ವಿಯಾಗಿದ್ದು, ಸಂಸ್ಥೆ ಆರಂಭಗೊಂಡ ಮೂರೇ ವರ್ಷದಲ್ಲಿ ತೃಪ್ತಿಕರ ಆರ್ಥಿಕ ಪ್ರಗತಿ ಸಾಧಿಸಿದೆ ಎಂದು ಶ್ರೀ ಗುಡೇ ಮಹಾಲಿಂಗೇಶ್ವರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎಚ್. ಜಯಶೀಲ ಶೆಟ್ಟಿ ಹೇಳಿದರು.



ಅವರು ಗುರುವಾರ ಹೆರಂಜಾಲುವಿನ ಸನ್ಮಾನ ಸಭಾಭವನದಲ್ಲಿ ಜರುಗಿದ ಶ್ರೀ ಗುಡೇ ಮಹಾಲಿಂಗೇಶ್ವರ ಸೌಹಾರ್ದ ಸಹಕಾರಿ ಸಂಘ ಹೆರಂಜಾಲು ಇದರ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘವು ಆರ್ಥಿಕ ವರ್ಷಾಂತ್ಯಕ್ಕೆ 8.52 ಕೋಟಿ ಠೇವಣಿ ಹೊಂದಿದ್ದು, 7.93ಕೋಟಿ ಸಾಲ ನೀಡಿದೆ ವಾರ್ಷಿಕವಾಗಿ 51.88 ಕೋಟಿ ವ್ಯವಹಾರ ನಡೆಸಿ, ನಿವ್ವಳ 7.36 ಲಕ್ಷ ಲಾಭ ಗಳಿಸಿದೆ. ಸಂಸ್ಥೆಯ ವಿವಿಧ ನಿಧಿಗಳಲ್ಲಿ 6.27 ಲಕ್ಷ ಮೀಸಲಿರಿಸಿದ್ದು, 1.05 ಕೋಟಿ ಮೊತ್ತದ ಹಣವನ್ನು ವಿವಿಧ ಬ್ಯಾಂಕುಗಳಲ್ಲಿ ಇರಿಸಲಾಗಿದೆ. ಸದಸ್ಯರಿಗೆ ಈ ಭಾರಿ ಶೇ.10 ಡಿವಿಡೆಂಟ್ ನೀಡಲಾಗುತ್ತದೆ ಎಂದರು.

ನಿರ್ದೇಶಕರಾದ ಅಣ್ಣಪ್ಪ ಶೆಟ್ಟಿ ಬಟ್ನಾಡಿ ಅವರು ಮಾತನಾಡಿ ಸಂಸ್ಥೆಯ ಪ್ರಗತಿಯಲ್ಲಿ ಅಧ್ಯಕ್ಷರು ಹಾಗೂ ನಿರ್ದೇಶಕರ ಮಂಡಳಿಯ ಶ್ರಮ, ಸಿಬ್ಬಂದಿಗಳ ಕಾರ್ಯಕ್ಷಮತೆ ಹಾಗೂ ಸದಸ್ಯರ ವಿಶ್ವಾಸ ದೊಡ್ಡದಿದೆ. ಕಡಿಮೆ ಅವಧಿಯಲ್ಲಿಯೇ ಸಂಸ್ಥೆ ತೃಪ್ತಿಕರ ಆರ್ಥಿಕ ಗುರಿ ತಲುಪಿದೆ. ಅಧ್ಯಕ್ಷರಾದ ಜಯಶೀಲ ಶೆಟ್ಟಿ ಅವರ ದೂರದೃಷ್ಟಿತ್ವದ ಫಲವಾಗಿ ನಗರ ಕೇಂದ್ರಿತವಾದ ಬ್ಯಾಂಕು ಹಾಗೂ ಸಹಕಾರಿ ಸಂಘವನ್ನು ನಮ್ಮೂರಿನಲ್ಲಿಯೂ ಆರಂಭಿಸಲು ಸಾಧ್ಯವಾಗಿದ್ದು, ಜನಸಾಮಾನ್ಯರು ಇದರ ಪ್ರಯೋಜನ ಪಡೆಯುವಂತಾಗಿದೆ ಎಂದರು.






ಈ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸಂಘ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಲಾಯಿತು. ಹಿರಿಯ ಸಹಕಾರಿ, ಸಾಹಿತಿ ಕೆ. ಪುಂಡಲೀಕ ನಾಯಕ್ ಹಾಗೂ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತೆ ಸುಮಂಗಲಾ ಗಾಣಿಗ ಅವರನ್ನು ಸನ್ಮಾನಿಸಲಾಯಿತು. ಸೌಹಾರ್ದ ಸಹಕಾರಿಯ ಅತ್ಯುತ್ತಮ ಸಂಘಗಳನ್ನು ಗುರುತಿಸಿ ಪ್ರೋತ್ಸಾಹಿಸಲಾಯಿತು.



ನಿರ್ದೇಶಕರಾದ ಸುಧಾಕರ ಎಸ್. ಶೆಟ್ಟಿ, ಎಚ್. ಸುರೇಶ್ ಶೆಟ್ಟಿ, ಹಳಗೇರಿ ಸುಭಾಶ್ಚಂದ್ರ ಶೆಟ್ಟಿ, ಮನೀಷ್ ಜೆ. ಶೆಟ್ಟಿ, ಸುಜಯ್ ಎಸ್. ಶೆಟ್ಟಿ, ಶೀಲ ಜಯಶೀಲ ಶೆಟ್ಟಿ, ಕುಶಲ ಉದಯ ಶೆಟ್ಟಿ, ಮಂಜುಶ್ರೀ ರವೀಂದ್ರ ಶೆಟ್ಟಿ ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಕಿರಣ್ ಶೆಟ್ಟಿ ಕುದ್ರುಕೋಡು ಸ್ವಾಗತಿಸಿದರು. ಸಿಇಓ ತಿಮ್ಮಪ್ಪ ಪೂಜಾರಿ ವಾರ್ಷಿಕ ವರದಿ, ಆಯವ್ಯಯ ಪತ್ರ ಹಾಗೂ ಮುಂದಿನ ಸಾಲಿನ ಬಜೆಟ್ ಮಂಡಿಸಿ ಅನುಮೋದನೆ ಪಡೆದರು. ವಿದ್ಯಾರ್ಥಿಗಳು ಪ್ರಾರ್ಥಿಸಿ, ಶೈಲೇಶ್ ವಂದಿಸಿದರು. ಶಿಕ್ಷಕರಾದ ಕರುಣಾಕರ ಶೆಟ್ಟಿ ಹಾಗೂ ವಿನಾಯಕ ಮೆರ್ಟ ನಿರೂಪಿಸಿದರು.















