ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನಡೆದ ಚಿನ್ನದ ಸರ ಕಳವು ಪ್ರಕರಣವನ್ನು ಇಲ್ಲಿನ ಪೊಲೀಸರು 24 ಗಂಟೆಗಳ ಒಳಗಾಗಿ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ಓರ್ವ ಮಹಿಳೆಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯ ಗಣೇಶ ನಗರದ ಯಾಧವ ದುರ್ಗಮ್ಮ ಎಂದು ಗುರುತಿಸಲಾಗಿದೆ. ಆಕೆಯಿಂದ ಕಳವುಗೈದ 2.5 ಲಕ್ಷ ರೂ. ಮೌಲ್ಯದ ಹವಳದ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ.
ಸೆಪ್ಟೆಂಬರ್ 26ರಂದು ರಾತ್ರಿ 8:50ರಿಂದ 9:15ರ ನಡುವೆ ದೇವಿಪ್ರಿಯಾ ಎಂಬ ಭಕ್ತೆಯ ಬ್ಯಾಗ್‌ನ ಜಿಪ್ ತೆರೆಯಲಾಗಿದ್ದು, ಅದರಲ್ಲಿ ಇಟ್ಟುಕೊಂಡಿದ್ದ ಸುಮಾರು 3 ಪವನ್ ಹವಳದ ಚಿನ್ನದ ಸರವನ್ನು ಅಪರಿಚಿತರು ಕಳವು ಮಾಡಿದ್ದರು. ಇದರ ಮೌಲ್ಯ ಅಂದಾಜು ರೂ.2.5 ಲಕ್ಷ ಎಂದು ದೂರಿನಲ್ಲಿ ಹೇಳಲಾಗಿದೆ.
ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಹೆಚ್.ಡಿ. ಕುಲಕರ್ಣಿ ಹಾಗೂ ಬೈಂದೂರು ವೃತ್ತ ನಿರೀಕ್ಷಕ ನೀಲೇಶ್ ಚೌಹಾಣ್ ಅವರ ಮಾರ್ಗದರ್ಶನದಲ್ಲಿ, ಕೊಲ್ಲೂರು ಠಾಣಾ ಉಪನಿರೀಕ್ಷಕ ವಿನಯ್ ಎಂ. ಕೊರ್ಲಹಳ್ಳಿ ಹಾಗೂ ತಂಡ ಸಿಸಿಟಿವಿ ದೃಶ್ಯಗಳು ಮತ್ತು ತಾಂತ್ರಿಕ ಮಾಹಿತಿಗಳ ಆಧಾರದ ಮೇಲೆ ತನಿಖೆ ಆರಂಭಿಸಿದರು. ಶೀಘ್ರದಲ್ಲೇ ಆರೋಪಿತೆ ಯಾಧವ ದುರ್ಗಮ್ಮ ಅವರನ್ನು ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಿಂದ ಬಂಧಿಸಿ, ಕಳವು ಮಾಡಿದ 3 ಪವನ್ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿತೆಯ ಬಂಧನ ಮತ್ತು ಚಿನ್ನ ವಶಪಡಿಸಿಕೊಳ್ಳುವ ಕಾರ್ಯ ದೂರು ದಾಖಲಾದ ಕೇವಲ 24 ಗಂಟೆಗಳೊಳಗೆ ನಡೆದಿದೆ.















