ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಬುಧವಾರ ಶರನ್ನವರಾತ್ರಿಯ ಮಹಾನವಮಿಯಂದು ದೇವಳದ ತಂತ್ರಿ ಹಾಗೂ ಪ್ರಧಾನ ಅರ್ಚಕ ಕೆ. ನಿತ್ಯಾನಂದ ಅಡಿಗ ನೇತೃತ್ವದಲ್ಲಿ ಬೆಳಿಗ್ಗೆ ಗಂಟೆ 11.30ಕ್ಕೆ ವಿಶೇಷ ಚಂಡಿಕಾಯಾಗ ಹಾಗೂ ಮಧ್ಯಾಹ್ನ 01.15ಕ್ಕೆ ಧನುರ್‌ಲಗ್ನ ಸುಹೂಮೂರ್ತದಲ್ಲಿ ಪುಷ್ಪರಥೋತ್ಸವ ನಡೆಯಿತು.
ರಥೋತ್ಸವ ಆರಂಭಗೊಳ್ಳುತ್ತಿದ್ದಂತೆ ಭಕ್ತವೃಂದ ’ಅಮ್ಮಾ ದೇವಿ, ನಾರಾಯಣಿ’ ಎಂಬಿತ್ಯಾದಿ ಉದ್ಘೋಷದಿಂದ ಮೈಮರೆತು ಭಕ್ತಿಪರವಶರಾದರು. ಪ್ರಾರಂಬಿಕ ಹಂತದಲ್ಲಿ ದೇವಿಯ ಉತ್ಸವಮೂರ್ತಿಯನ್ನು ರಥದಲ್ಲಿ ಕುಳ್ಳಿರಿಸಿ ದೆವಾಲಯದ ಒಳಪ್ರಾಂಗಣದಲ್ಲಿ ಒಂದು ಸುತ್ತು ಬರುತ್ತಿದ್ದಂತೆ ಶ್ರೀ ಮೂಕಾಂಬಿಕೆಯ ಸ್ತೋತ್ರಪಠಿಸಿ ದೇವಿಯ ದರ್ಶನ ಪಡೆದು ಕಣ್ತುಂಬಿಕೊಂಡು ಪುಳಕಿತರಾದರು.

ಬಳಿಕ ಪುಷ್ಪರಥದಿಂದ ಅರ್ಚಕರು ಪ್ರಸಾದ ರೂಪವಾಗಿ ಎಸೆಯುವ ನಾಣ್ಯಗಳನ್ನು ಪಡೆಯಲು ಸೇರಿದ ಭಕ್ತರಲ್ಲಿ ಪೈಪೋಟಿ ಹೆಚ್ಚಾಗಿ ಸ್ವಲ್ಪಕಾಲ ನೂಕುನುಗ್ಗಲು ಉಂಟಾಯಿತು.
ದೇವಳದ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ ಕುಮಾರ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ, ಸದಸ್ಯರಾದ ರಘುರಾಮ ದೇವಾಡಿಗ ಆಲೂರು, ಮಹಾಲಿಂಗ ನಾಯ್ಕ್, ಯು. ರಾಜೇಶ ಕಾರಂತ್, ಸುರೇಂದ್ರ ಶೆಟ್ಟಿ, ಅಭಿಲಾಷ್ ಪಿ. ವಿ., ಧನಾಕ್ಷಿ ವಿಶ್ವನಾಥ, ಸುಧಾ ಕೆ., ಗ್ರಾಪಂ ಅಧ್ಯಕ್ಷರು, ಸದಸ್ಯರು, ವಿವಿಧ ಸ್ತರದ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ಯಾವುದೇ ರೀತಿಯ ಅಹಿತಕರ ಘಟನೆ ಸಂಭವಿಸದಂತೆ ಮುಂಜಾಗೃತಾ ಕ್ರಮವಾಗಿ ಪೋಲಿಸ್ ಮತ್ತು ದೇವಳದ ಸಿಬ್ಬಂದಿಗಳು ವಿಶೇಷ ಬಿಗು ಬಂದೋಬಸ್ತ್ ಮಾಡಿದ್ದರು.

ವಿಜಯದಶಮಿಯಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಪ್ರಾಂಗಣದಲ್ಲಿ ಪುಟಾಣೆ ಮಕ್ಕಳಿಗೆ ಪ್ರಾಥಃಕಾಲ 4ರಿಂದ ಅಕ್ಷರಾಭ್ಯಾಸ ನೀಡಲಾಯಿತು. ಲಕ್ಷ್ಮೀ, ಸರಸ್ವತಿ ಹಾಗೂ ಪಾರ್ವತಿ ಐಕ್ಯವಾಗಿ ನೆಲೆನಿಂತ ಕೊಲ್ಲೂರು ಕ್ಷೇತ್ರದಲ್ಲಿ ವಿದ್ಯಾರಂಭ ಮಾಡಿದರೆ ಶೈಕ್ಷಣಿಕವಾಗಿ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಎಂಬ ಅಚಲ ನಂಬಿಕೆ ಭಕ್ತರದು.
ನೆರೆಯ ಕೇರಳ ಹಾಗೂ ಇತರೇ ರಾಜ್ಯಗಳ ಹಲವಾರು ಭಕ್ತರು ತಮ್ಮ ಪುಟಾಣಿ ಮಕ್ಕಳಿಗೆ ವಿದ್ಯೆಯನ್ನು ಪ್ರಾರಂಭಿಸುವ ಮೊದಲು ನವರಾತ್ರಿಯ ವಿಜಯದಶಮಿಗಾಗಿ ಕಾದು ವಿದ್ಯಾರಂಭ ಮಾಡುತ್ತಾರೆ. ಪಾಲಕರು ತಮ್ಮ ಮಕ್ಕಳ ಕೈಹಿಡಿದು ಅಕ್ಕಿಯಲ್ಲಿ ಓಂಕಾರಿಂದ ಪ್ರಾರಂಭಿಸಿ ವರ್ಣಮಾಲೆಯನ್ನು ಬರೆಸುತ್ತಾರೆ. ನಂತರ ಅರ್ಚಕರು ಮಕ್ಕಳ ನಾಲಗೆ ಮೇಲೆ ಚಿನ್ನದ ಉಂಗುರದಿಂದ ಓಂಕಾರ ಬರೆಯುತ್ತಾರೆ. ಬಳಿಕ ಮಕ್ಕಳು ಸರಸ್ವತಿ ಮಂಟಪದಲ್ಲಿ ಸರಸ್ವತಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಇಲ್ಲಿಗೆ ವಿದ್ಯಾರಂಭದ ವಿಧಿ-ವಿಧಾನಗಳು ಮುಗಿಯುತ್ತದೆ.
ನಂತರ ಮಕ್ಕಳಿಗೆ ನವಾನ್ನಪ್ರಾಶನ ಮಾಡಿಸುತ್ತಾರೆ. ಅಲ್ಲದೇ ಕೊಲ್ಲೂರು ಗ್ರಾಮಸ್ಥರೂ ಕೂಡಾ ವಿಜಯದಶಮಿಯಂದು ಕದಿರುಹಬ್ಬ (ಹೊಸ್ತು) ಆಚರಿಸುತ್ತಾರೆ. ಈ ಬಾರಿಯೂ ಕೂಡಾ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಳದಲ್ಲಿ ಸಾವಿರಾರು ಮಕ್ಕಳಿಗೆ ವಿದ್ಯಾರಂಭ ಮಾಡಲಾಯಿತು. ದೇವಳದ ಆಡಳಿತ ಮಂಡಳಿ, ವ್ಯವಸ್ಥಾಪನಾ ಸಮಿತಿ ಹಾಗೂ ಅರ್ಚಕವೃಂದ ಈ ಕಾರ್ಯಕ್ಕೆ ಉತ್ತಮ ರೀತಿಯ ವ್ಯವಸ್ಥೆ ಮಾಡಿದ್ದರು. ಸಂಜೆ ಶ್ರೀ ಮೂಕಾಂಬಿಕಾ ದೇವಿಯ ವಿಜಯೋತ್ಸವದೊಂದಿಗೆ ಶರನ್ನವರಾತ್ರಿ ಸಂಪನ್ನಗೊಂಡಿತು.















