ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕೋವಿಡ್ ಸಮಯದಲ್ಲಿ ಸ್ಥಗಿತಗೊಂಡಿದ್ದ ಬೈಂದೂರು – ಬೆಂಗಳೂರು ಕೆ.ಎಸ್.ಆರ್.ಟಿ.ಸಿ ಸಂಜೆ ಬಸ್ ಸೇವೆಯು ಗ್ಯಾರಂಟಿ ಅನುಷ್ಠಾನ ಸಮಿತಿ ನಿರಂತರ ಒತ್ತಡದಿಂದಾಗಿ ಬುಧವಾರದಿಂದ ಪುನರಾರಂಭಗೊಳ್ಳುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಹೆಚ್ಚಿನ ಉಪಯೋಗ ಆಗಲಿದೆ ಎಂದು ಬೈಂದೂರು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಮೋಹನ್ ಪೂಜಾರಿ ಹೇಳಿದರು.

ಅವರು ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಗ್ಯಾರಂಟಿ ಅನುಷ್ಠಾನ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೈಂದೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣವನ್ನು ಮುಖ್ಯಮಂತ್ರಿಗಳು ಸದ್ಯದಲ್ಲಿಯೇ ಉದ್ಘಾಟಿಸಲಿದ್ದು, ಬಾಕಿ ಇರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ತಿಳಿಸಿದರು.

ಪಡಿತರ ಚೀಟಿ ಸಮಸ್ಯೆ ಗಮನಹರಿಸಿ:
ರಾಜ್ಯದಲ್ಲಿ ಅನರ್ಹ ಬಿ.ಪಿ.ಎಲ್ ಕಾರ್ಡುಗಳು ರದ್ದಾಗಿ ಎ.ಪಿ.ಎಲ್ ಕಾರ್ಡ್ ಆಗುತ್ತಿದೆ. ಈ ನಡುವೆ ಕೆಲವು ಅರ್ಹ ಬಿ.ಪಿ.ಎಲ್ ಕಾರ್ಡುದಾರರಿಗೂ ತೊಂದರೆಯಾಗಿದೆ. ಬ್ಯಾಂಕ್ ಸಾಲದ ಉದ್ದೇಶಕ್ಕಾಗಿ ಮಾಡಿದ ಐ.ಟಿ.ಆರ್ ರಿಟರ್ನ್ ಕಾರಣವನ್ನು ಇಟ್ಟುಕೊಂಡು ಕಾರ್ಡ್ ರದ್ದಾಗಿದೆ. ಅಂತಹ ಪ್ರಕರಣವನ್ನು ಪರಿಶೀಲಿಸಿ ಆ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡುವಂತೆ ಅಧ್ಯಕ್ಷ ಮೋಹನ್ ಪೂಜಾರಿ ಸೂಚಿಸಿದರು. ಈ ನಡುವೆ ದೇವದಾಸ್ ವಿ.ಜೆ ಮಾತನಾಡಿ, ಮನೆಯಲ್ಲಿ ಉತ್ತಮ ದುಡಿಮೆ ಇರುವವರು ಪ್ರತ್ಯೇಕ ಎಪಿಎಲ್ ಕಾರ್ಡು ಮಾಡಿಕೊಂಡು, ಉಳಿದವರು ಬಿಪಿಎಲ್ ಕಾರ್ಡಿನಲ್ಲಿಯೇ ಮುಂದುವರಿಯುವ ನೂರಾರು ಪ್ರಕರಣಗಳಿವೆ. ಬಡವರಿಗಾಗಿ ಇರುವ ಸರಕಾರದ ಯೋಜನೆಯನ್ನು ಹೀಗೆ ದುರಪಯೋಗಪಡಿಸಿಕೊಳ್ಳುವುದು ಸರಿಯಲ್ಲ ಎಂದರು.
ಗ್ಯಾರಂಟಿಯಿಂದ 233.83 ಕೋಟಿ:
ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯಿಂದ ಬೈಂದೂರು ತಾಲೂಕಿಗೆ ಇದುವರೆಗೆ ಸುಮಾರು 233.83 ಕೋಟಿ ರೂ. ವೆಚ್ಚಮಾಡಲಾಗಿದೆ. ಗೃಹಲಕ್ಷ್ಮೀ ಯೋಜನೆಯಿಂದ ಜುಲೈ ತಿಂಗಳ ತನಕ 21677 ಮಂದಿಗೆ 117.58ಕೋಟಿ ಜಮಾ ಆಗಿದೆ. 6708 ಮಂದಿಗೆ ಹಣ ಬರುವುದು ಬಾಕಿ ಇದೆ. ಅಗಸ್ಟ್, ಸೆಪ್ಟಂಬರ್ ಹಾಗೂ ಅಕ್ಟೋಬರ್ ತಿಂಗಳ ಹಣ ಸಂದಾಯವಾಗುವುದು ಬಾಕಿ ಇದೆ. ಗೃಹ ಜ್ಯೋತಿ ಯೋಜನೆಯಿಂದ ಬೈಂದೂರು ಮೆಸ್ಕಾಂ ವ್ಯಾಪ್ತಿಯ 28512 ಕುಟುಂಬಗಳಿಗೆ 45.52 ಕೋಟಿ ರೂ., ತಲ್ಲೂರು ಮೆಸ್ಕಾಂ ಉಪ ಕೇಂದ್ರ ವ್ಯಾಪ್ತಿಯ 1848 ಕುಟುಂಬಗಳಿಗೆ 2.92 ಕೋಟಿ ರೂ. ಸೇರಿದಂತೆ ಸುಮಾರು 48.44 ಕೋಟಿ ರೂ. ವೆಚ್ಚವಾಗಿದೆ. ಅನ್ನಭಾಗ್ಯ ಯೋಜನೆಯಡಿ 25,532 ಪಡಿತರ ಚೀಟಿಗಳಿಗೆ 1.91 ಕೋಟಿ ರೂ. ವಿನಿಯೋಗಿಸಲಾಗಿದೆ. ಯುವ ನಿಧಿ ಯೋಜನೆಯಡಿ 525 ಫಲಾನುಭವಿಗಳ ನೊಂದಣಿಯಾಗಿದ್ದು 419 ಮಂದಿಗೆ 1.15ಲಕ್ಷ ರೂ. ಜಮಾ ಆಗಿದೆ. ಶಕ್ತಿ ಯೋಜನೆಯಡಿ ಇದುವರೆಗೆ 1.78ಕೋಟಿ ಮಹಿಳೆಯರು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸಿದ್ದು 64.73ಕೋಟಿ ರೂ. ರಿಯಾಯಿತಿ ಪಡೆದಿದ್ದಾರೆ ಎಂದರು.
ಬೈಂದೂರು ತಹಶೀಲ್ದಾರ್ ರಾಮಚಂದ್ರಪ್ಪ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಕಾರಿ ಬಿ. ರಾಮದಾಸ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರಾದ ಮಾಲತಿ ಶಿವಾನಂದ, ಅನೀಶ್ ಪೂಜಾರಿ, ಸೂರ್ಯಕಾಂತಿ ದೇವದಾಸ್ ವಿ.ಜೆ., ಬಾಬು ದೇವಾಡಿಗ, ಮುಕ್ರಿ ಮೊಹಮ್ಮದ್ ಅಲ್ತಾಫ್, ಅಣ್ಣಪ್ಪ ಶೆಟ್ಟಿ ಮೆಸ್ಕಾಂ, ಕೆಎಸ್‌ಆರ್‌ಟಿಸಿ, ಮಹಿಳಾ ಮತ್ತು ಮಕ್ಕಳ ಶಿಶು ಅಭಿವೃದ್ಧಿ ಇಲಾಖೆ, ಆಹಾರ ಇಲಾಖೆ ಹಾಗೂ ಯುವ ಸಬಲೀಕರಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.















