ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅಂಪಾರು ಸಂಜಯ ಗಾಂಧಿ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ಅಂಪಾರಿನ ಸಂಜಯಗಾಂಧಿ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಮಕ್ಕಳ ಆರೋಗ್ಯದ ಮಹತ್ವ ಕುರಿತು ಅತ್ಯಂತ ಯಶಸ್ವಿ ಮತ್ತು ಮಾಹಿತಿಪೂರ್ಣ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮತ್ತು ಪ್ರಧಾನ ಭಾಷಣಕಾರರಾಗಿ ಆಗಮಿಸಿದ್ದ ಉಡುಪಿ ಜಿಲ್ಲಾ ನಿವೃತ್ತ ಅರೋಗ್ಯಾಧಿಕಾರಿ ಡಾ. ನಾಗಭೂಷಣ ಉಡುಪ ಅವರು ಮಕ್ಕಳ ಆರೋಗ್ಯದ ಬಗ್ಗೆ ಪರಿಣಾಮಕಾರಿಯಾಗಿ ಮಾತನಾಡಿ, “ಉತ್ತಮ ಆರೋಗ್ಯ ಅಥವಾ ಯೋಗಕ್ಷೇಮ ಎಂದರೆ ಕೇವಲ ದೈಹಿಕವಾಗಿ ಮಾತ್ರವಲ್ಲದೆ, ಮಾನಸಿಕ ಮತ್ತು ಸಾಮಾಜಿಕವಾಗಿಯೂ ಆರೋಗ್ಯವಾಗಿರುವುದು. ಆರೋಗ್ಯಕರ ಸಮತೋಲಿತ ಆಹಾರ, ವೈಯಕ್ತಿಕ ಸ್ವಚ್ಛತೆ ಮತ್ತು ಉತ್ತಮ ಜೀವನಶೈಲಿಯ ಮಹತ್ವವನ್ನು ಸರಳ ಉದಾಹರಣೆಗಳೊಂದಿಗೆ ವಿವರಿಸಿದರು. ಪೋಷಕರು ಮಕ್ಕಳ ಆಹಾರ ಪದ್ಧತಿಯಲ್ಲಿ ಪೌಷ್ಟಿಕಾಂಶಯುಕ್ತ ತರಕಾರಿಗಳು ಮತ್ತು ಹಣ್ಣುಗಳನ್ನು ಸೇರಿಸುವ ಅಗತ್ಯದ ಬಗ್ಗೆ ತಿಳುವಳಿಕೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಜಯ ಗಾಂಧಿ ಚಾರಿಟೇಬಲ್ ಟ್ರಸ್ಟ್‌ನ ಕೋಶಾಧಿಕಾರಿ ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ ವಹಿಸಿ ಮಾತನಾಡಿ, ಇಂತಹ ಆರೋಗ್ಯ ಸಂಬಂಧಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಆಗ ಮಾತ್ರ ಸಮಾಜದಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಸಾಧ್ಯ ಎಂದರು.
ವೇದಿಕೆಯಲ್ಲಿ ಶಾಲೆಯ ಆಡಳಿತಾಧಿಕಾರಿ ಚೈತ್ರಾ ಯಡಿಯಾಳ ಅವರು ಉಪಸ್ಥಿತರಿದ್ದು, ಮಕ್ಕಳಲ್ಲಿ ಆರೋಗ್ಯಕರ ಜೀವನಶೈಲಿ, ಸ್ವಚ್ಛತೆ ಮತ್ತು ಸಮತೋಲಿತ ಆಹಾರದ ಬಗ್ಗೆ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಶಾಲೆಯ ಮುಖ್ಯೋಪಾಧ್ಯಾಯಿನಿ ವಿಲಾಸಿನಿ ಶೆಟ್ಟಿ ಅವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು .
ಮಕ್ಕಳ ಆರೋಗ್ಯಕರ ಭವಿಷ್ಯದ ದೃಷ್ಟಿಯಿಂದ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ಯಶಸ್ಸಿನಲ್ಲಿ ಪೋಷಕರ ಸಕ್ರಿಯ ಪಾಲ್ಗೊಳ್ಳುವಿಕೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಮಕ್ಕಳು ಮತ್ತು ಪೋಷಕರು ಈ ಕಾರ್ಯಕ್ರಮದ ನೇರ ಫಲಾನುಭವಿಗಳಾಗಿದ್ದು, ಆರೋಗ್ಯದ ಬಗ್ಗೆ ಉಪಯುಕ್ತ ಮಾಹಿತಿ ಪಡೆದುಕೊಂಡರು. ಸ್ಥಳೀಯ ಆಶಾ ಕಾರ್ಯಕರ್ತೆ ಸುಕನ್ಯಾ ಕಿಣಿ ಅವರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಈ ಉಪಕ್ರಮವು ಮಕ್ಕಳಲ್ಲಿ ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸಲು ಮತ್ತು ಪೋಷಕರಲ್ಲಿ ಜಾಗೃತಿ ಮೂಡಿಸಲು ಪ್ರಮುಖ ಹೆಜ್ಜೆಯಾಗಿದೆ.















