ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರದ ಕಾರ್ಟೂನಿಸ್ಟರು ಪ್ರತಿವರ್ಷವೂ ಕಾರ್ಟೂನಿಸ್ಟ್ ಸತೀಶ್ ಆಚಾರ್ಯ ಅವರ ಮುಂದಾಳತ್ವದಲ್ಲಿ ಆಯೋಜಿಸುತ್ತಿರುವ ಕಾರ್ಟೂನು ಹಬ್ಬ, ಈ ಭಾರಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯ ಸಹಭಾಗಿತ್ವದೊಂದಿಗೆ “ಖಾಕಿಗೊಂದು ಕಾರ್ಟೂನು ಸೆಲ್ಯೂಟ್” ಥೀಮ್ನೊಂದಿಗೆ ನಡೆಯಲಿದೆ. “ಖಾಕಿ ಕಾರ್ಟೂನು ಹಬ್ಬ” ಕಾರ್ಯಕ್ರಮವು ನವೆಂಬರ್ 15ರಿಂದ 19ರವರೆಗೆ ಕುಂದಾಪುರದ ರೋಟರಿ ಕಲಾ ಮಂದಿರದಲ್ಲಿ ನಡೆಯಲಿದೆ.
ದಿನಾಂಕ 15-11-2025ರ ಶನಿವಾರ ಬೆಳಿಗ್ಗೆ 10:30ಕ್ಕೆ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಬಿ. ದಯಾನಂದ್ ಐಪಿಎಸ್, ಪೊಲೀಸ್ ಮಹಾನಿರ್ದೇಶಕರು, (ಕಾರಾಗೃಹ ಮತ್ತು ಸುಧಾರಣೆ) ಅವರು ಮಾಡಲಿದ್ದಾರೆ.. ಕಾರ್ಯಕ್ರಮದ ವಿಶೇಷ ಅತಿಥಿಗಳಾಗಿ ಬಿ ಎ ಬಾವಾ ನಿವೃತ್ತ ಡೆಪ್ಯೂಟಿ ಪೊಲೀಸ್ ಕಮಿಷನರ್, ಶ್ರೀ ವಿನಯ್ ಗಾಂವ್ಕರ್ ನಿವೃತ್ತ ಡೆಪ್ಯೂಟಿ ಪೊಲೀಸ್ ಕಮಿಷನರ್, ಹರಿರಾಮ್ ಶಂಕರ್ (ಐಪಿಎಸ್), ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ರಾಜೇಶ್ ಕೆ.ಸಿ, ಪತ್ರಕರ್ತರು ಇವರು ಉಪಸ್ಥಿತರಿರಲಿದ್ದಾರೆ.

ಕಾರ್ಯಕ್ರಮದ ಉದ್ಘಾಟನಾ ಹಾಗೂ ಸಮಾರೋಪ ಸಮಾರಂಭಗಳಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮವಾಗಿ ಸೇವೆ ಸಲ್ಲಿಸಿರುವ ಆಯ್ದ 10 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸನ್ಮಾನ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ. ಶನಿವಾರ ಮಧ್ಯಾಹ್ನ 2 ಗಂಟೆಗೆ ಪೋಷಕರ ಮಕ್ಕಳಿಗಾಗಿ ಕಾರ್ಟೂನ್ ಸ್ಪರ್ಧೆಗಳು ನಡೆಯಲಿದೆ. ಪೋಷಕರಿಗಾಗಿ ಮಧ್ಯಾಹ್ನ 2 ಗಂಟೆಗೆ “ನಿಮ್ಮ ಮಕ್ಕಳನ್ನು ರಕ್ಷಿಸಿಕೊಳ್ಳಿ” ಎಂಬ ಶೀರ್ಷಿಕೆಯಡಿ ಒಂದು ವಿಶೇಷ ಸಂವಾದ ಕಾರ್ಯಕ್ರಮ ನಡೆಯಲಿದೆ ಈ ಸಂವಾದದಲ್ಲಿ ಡಾ. ವಿರೂಪಾಕ್ಷ ದೇವರಮನೆ, ಖ್ಯಾತ ಮನೋ ವೈದ್ಯರು, ಎ.ವಿ ಬಾಳಿಗಾ ಆಸ್ಪತ್ರೆ ಉಡುಪಿ ಮತ್ತು ನಂಜಾ ನಾಯ್ಕ್ ಎನ್, ಪಿ. ಎಸ್. ಐ ಕುಂದಾಪುರ ಇವರಿಂದ ಉಪನ್ಯಾಸ ಇರಲಿದೆ.
ದಿನಾಂಕ 16-11-2025ರ ಬೆಳಿಗ್ಗೆ ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 1:00 ಗಂಟೆಯವರೆಗೆ, ಕಲಾಸಕ್ತ ಉಡುಪಿ ಜಿಲ್ಲಾ ಪೋಲಿಸ್ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳಿಗೆ ಖ್ಯಾತ ವ್ಯಂಗ್ಯ ಚಿತ್ರಕಾರರಾದ ಸತೀಶ್ ಆಚಾರ್ಯ ಅವರಿಂದ ವಿಶೇಷ ಕಾರ್ಟೂನ್ ವರ್ಕ್‌ಶಾಪ್ ನಡೆಯಲಿದೆ ಹಾಗೂ ದಿನಾಂಕ 17, 18 ಹಾಗೂ 19 ನವೆಂಬರ್ 2025 ರಂದು ಮೂರು ದಿನಗಳ ಕಾಲ ಕಾರ್ಟೂನ್ ಪ್ರದರ್ಶನ, ವಿದ್ಯಾರ್ಥಿಗಳಿಗೆ ಕಾರ್ಯಾಗಾರ ಮತ್ತು ಲೈವ್ ಕ್ಯಾರಿಕೇಚರಿಂಗ್ ಇರಲಿದೆ.










