ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ ಇಲ್ಲಿ ವೃಕ್ಷ ದೇವತೆ ಸಾಲು ಮರದ ತಿಮ್ಮಕ್ಕನವರಿಗೆ ನುಡಿ-ನಮನ ಎಂಬ ಬಹಳ ವೈಶಿಷ್ಟಪೂರ್ಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ರಾಮರಾಯ ಆಚಾರ್ಯ ಅವರು ಮಾತನಾಡಿ, ಸಾಲು ಮರದ ತಿಮ್ಮಕ್ಕ ಅಕ್ಷರಭ್ಯಾಸ ಮಾಡದಿದ್ದರೂ, ಪ್ರಕೃತಿ ಬಗೆಗಿನ ಅವರ ಕಾಳಜಿ ಅವಿಸ್ಮರಣೀಯ. ಹೆಸರು, ಪದವಿ ಹಾಗೂ ಹಣಕ್ಕಾಗಿ ಹಪಹಪಿಸುವ ಈ ಕಾಲಘಟ್ಟದಲ್ಲಿ ತಿಮ್ಮಕ್ಕರವರು ಸಹಜವಾದ ಒಂದು ಧ್ರುವತಾರೆ. ಇಂದಿನ ಎಲ್ಲರಿಗೂ ಕೀರ್ತಿ ಶೇಷರಾದ ತಿಮ್ಮಕ್ಕರವರು ಆದರ್ಶರಾಗಬೇಕು ಮತ್ತು ಅವರ ಜೀವನ ಮೌಲ್ಯಗಳೆಲ್ಲವನ್ನು ಪ್ರತಿಯೊಬ್ಬರೂ ಕೂಡ ಅಳವಡಿಸಿಕೊಳ್ಳಬೇಕು ಎಂದರು.
ಕೇವಲ ತನ್ನ ಲಾಭಕ್ಕಾಗಿ ಪ್ರಕೃತಿಯನ್ನು ದೋಚುತ್ತಿರುವ ಈ ಕಾಲದಲ್ಲಿ ನಿಸ್ವಾರ್ಥ ಸೇವೆಗೈದ ಅವರನ್ನು ನಾವು ಅನುದಿನವೂ ಸ್ಮರಿಸಬೇಕು ಮತ್ತು ಕನಿಷ್ಟ ಪಕ್ಷ ಒಂದು ಗಿಡವನ್ನಾದರೂ ನೆಟ್ಟು ಅದರ ಲಾಲನೆ-ಪಾಲನೆ ಮಾಡುವ ಜವಾಬ್ದಾರಿಯನ್ನೂ ಹೊರಬೇಕು ಎಂದು ನುಡಿದರು.
ಇಕೋ ಕ್ಲಬ್ ಆಶ್ರಯದಲ್ಲಿ ಮೂಡಿಬಂದ ಈ ಕಾರ್ಯಕ್ರಮದಲ್ಲಿ ಕಾಲೇಜಿನ ಅಂತರಿಕ ಗುಣಮಟ್ಟ ಭರವಸಾ ಕೋಶ ಹಾಗೂ ಇಕೋ ಕ್ಲಬ್‌ನ ಸಂಚಾಲಕರಾದ ನಾಗರಾಜ ಯು. ಮಾತನಾಡಿ 114 ವರ್ಷಗಳ ಸಾರ್ಥಕ ಬದುಕನ್ನು ಪೂರ್ಣಗೊಳಿಸಿದ ನಾಡು ಕಂಡ ಅಪರೂಪದ ಮೇರು ವ್ಯಕ್ತಿತ್ವವಾದ ಸಾಲು ಮರದ ತಿಮ್ಮಕ್ಕನವರಿಗೆ ನುಡಿ-ನಮನ ಸಲ್ಲಿಸಿದರು. ನಂತರ ಮಾನಾಡಿ, ನಾವು ಮಾಡುವ ಸತ್ಕಾರ್ಯಗಳಿಗೂ ಮತ್ತು ನಾವು ಪಡೆದ ವಿದ್ಯಾಭ್ಯಾಸಕ್ಕೂ ಯಾವುದೇ ಸಂಬಂಧವಿಲ್ಲ. ಹಾಗೆ ನೋಡಲು ಹೊರಟರೆ, ಕಾರ್ಯಕ್ರಮದ ಭಾಗವಾಗಿ ತಿಮ್ಮಕ್ಕರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ನಾಗರಾಜ ವೈದ್ಯ ಎಂ. ಹಾಗೂ ಗ್ರಂಥಪಾಲಕರಾದ ವೆಟರನ್ ರವಿಚಂದ್ರ ಹೆಚ್.ಎಸ್. ಅವರು ಕೂಡ ನುಡಿ-ನಮನ ಸಮರ್ಪಿಸಿದರು. ಪ್ರಥಮ ಬಿ.ಎ. ವಿದ್ಯಾರ್ಥಿನಿ ನಿಸರ್ಗ ಸಾಲು ಮರದ ತಿಮ್ಮಕ್ಕನ ಕುರಿತಾದ ಹಾಡಿಗೆ ಧ್ವನಿಯಾದರು. ಅಂತಿಮ ಬಿ.ಬಿ.ಎ ವಿದ್ಯಾರ್ಥಿ ಆದಿತ್ಯ ಅವರು ಕಾರ್ಯಕ್ರಮ ನಿರ್ವಹಿಸಿದ್ದರು. ಅಂತಿಮ ಬಿ.ಕಾಂ. ವಿದ್ಯಾರ್ಥಿನಿ ದೀಕ್ಷಾ ಧನ್ಯವಾದ ಸಮರ್ಪಿಸಿದರು.















