ಕುಂದಾಪ್ರ ಡಾಟ್ ಕಾಂ ಸುದ್ದಿ.
ಬ್ರಹ್ಮಾವರ: ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ (ರುಡ್ ಸೆಟ್) ಸಂಸ್ಥೆ ಬ್ರಹ್ಮಾವರ ಇವರ ಆಶ್ರಯದಲ್ಲಿ ಕೆನರಾ ಬ್ಯಾಂಕ್‌ನ ಸ್ಥಾಪಕರಾದ ಅಮ್ಮೆಂಬಲ್ ಸುಬ್ಬ ರಾವ್ ಪೈ ಅವರ 173ನೇ ಜನ್ಮದಿನವನ್ನು ಆಚರಿಸಿಕೊಂಡು ಹಾಗೂ ಮೋಟಾರ್ ರಿವೈಂಡಿಂಗ್ ತರಬೇತಿಯ ಉದ್ಘಾಟನಾ ಸಮಾರಂಭವು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಉಡುಪಿ ಕೆನರಾ ಬ್ಯಾಂಕ್ ಲೀಡ್ ಡಿಸ್ಟ್ರಿಕ್ಟ್ ಮ್ಯಾನೇಜರ್ ಹರೀಶ್ ಜಿ. ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ, ಭಾರತ ದೇಶದಲ್ಲಿ ಕೆನರಾ ಬ್ಯಾಂಕ್ ಮೂರನೇ ಸ್ಥಾನ ಪಡೆದುಕೊಂಡಿದೆ. ಸ್ವಉದ್ಯೋಗ ಮಾಡುವಂತ ಎಲ್ಲಾ ಶಿಬಿರಾರ್ಥಿಗಳಿಗೆ ಕೆನರಾ ಬ್ಯಾಂಕು ಬೆನ್ನೆಲುಬಾಗಿ ಸಾಲ ಸೌಲಭ್ಯಗಳನ್ನು ಕೊಡುತ್ತದೆ. ಜೊತೆಗೆ ತೆಗೆದುಕೊಂಡ ಸಾಲವನ್ನು ಸರಿಯಾದ ರೀತಿಯಲ್ಲಿ ಮರುಪಾವತಿ ಮಾಡಿದರೆ ಯಾವುದೇ ರೀತಿಯ ತೊಂದರೆಗಳು ಉದ್ಯಮದಲ್ಲಿ ಬರುವುದಿಲ್ಲ ಎಂದರು.

ಅದೇ ರೀತಿ ಕೆನರಾ ಬ್ಯಾಂಕ್‌ನ ಸ್ಥಾಪಕರಾದ ಅಮ್ಮೆಂಬಲ್ ಸುಬ್ಬ ರಾವ್ ಪೈ ಅವರ ಸಾಮಾಜಿಕ ಕಳಕಳಿಯನ್ನು ಹಾಗೂ ಬ್ಯಾಂಕಿನ ಸ್ಥಾಪನೆಯಿಂದಾಗಿ ಸಾವಿರಾರು ಮಂದಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿರುವುದು ಅಸಾಧಾರಣ ಸಾಧನೆಯನ್ನು ಕೊಂಡಾಡಿದರು. ಹಾಗೆಯೇ ಬ್ಯಾಂಕಿನ ಹೆಚ್ಚಿನ ಯೋಜನೆಗಳು ಕಿರು ಉದ್ಯಮಗಳಿಗೆ ಸಾಲ ಸೌಲಭ್ಯಗಳನ್ನು ಒದಗಿಸುತ್ತದೆ ಅದನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳುವುದರ ಬಗೆಗೆ ಪ್ರಯತ್ನ ಮಾಡಿ, ಹಾಗೂ ಉತ್ಪನ್ನ ಹಾಗೂ ಸೇವೆಯನ್ನು ಒದಗಿಸುವಾಗ ಗುಣಮಟ್ಟದ ಕುರಿತು ಕಾಳಜಿ ಇರಲಿ ಎಂದು ಹೇಳಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ರುಡ್ ಸೆಟ್ ಸಂಸ್ಥೆಯ ನಿರ್ದೇಶಕರಾದ ಡಾ. ಬೊಮ್ಮಯ್ಯ ಎಂ. ಮಾತನಾಡಿ, ಕೆನರಾ ಬ್ಯಾಂಕ್‌ನ ಸ್ಥಾಪಕರಾದ ಅಮ್ಮೆಂಬಲ್ ಸುಬ್ಬ ರಾವ್ ಪೈ ಅವರು ಅಂದು ತೆಗೆದುಕೊಂಡ ನಿರ್ಧಾರದಿಂದ ಸಾಕಷ್ಟು ಜನ ನಿರುದ್ಯೋಗ ಯುವಕ ಯುವತಿಯರ ಪಾಲಿಗೆ ಉದ್ಯೋಗದ ಕಾಯಕಲ್ಪವನ್ನು ಒದಗಿಸಿದೆ. ಹಾಗಾಗಿ ರುಡ್ಸೆಟ್ ಸಂಸ್ಥೆಯ ಮುಖಾಂತರ ವರ್ಷಂಪ್ರತಿ ಸಾವಿರಾರು ಶಿಬಿರಾರ್ಥಿಗಳು ಸ್ವ ಉದ್ಯೋಗದ ತರಬೇತಿಯನ್ನು ಪಡೆದು, ಸ್ವ ಉದ್ಯೋಗದ ಕಡೆಗೆ ಗಮನ ಹರಿಸುತ್ತಿದ್ದಾರೆ. ಹಾಗಾಗಿ ಸಂಸ್ಥೆಯು ನೀಡುವ ತರಬೇತಿಯನ್ನು ಶ್ರದ್ಧೆಯಿಂದ ಪಡೆಯಿರಿ ಯಶಸ್ವಿ ಉದ್ಯಮಿಗಳಾಗಿ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಉಪನ್ಯಾಸಕರು ಸಂತೋಷ್ ಕಾರ್ಯಕ್ರಮವನ್ನು ನಿರೂಪಿಸಿ, ಕಚೇರಿ ಸಹಾಯಕ ಶಾಂತಪ್ಪ ಸ್ವಾಗತಿಸಿ, ಹಿರಿಯ ಕಛೇರಿ ಸಹಾಯಕರಾದ ರವಿ ಸಾಲ್ಯಾನ್ ವಂದಿಸಿದರು.















