ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನವು ತಲತಲಾಂತರಗಳಿಂದಲೂ ಯಕ್ಷಗಾನಕ್ಕೆ ಪ್ರೋತ್ಸಾಹ ನೀಡುತ್ತಾ ಬಂದಿದ್ದು, ಕರಾವಳಿಯ ಅತ್ಯಂತ ಖ್ಯಾತಿಯ ಮೇಳಗಳಾದ ಮಂದರ್ತಿ, ಚೋಣಮನೆ, ಗೋಳಿಗರಡಿ ಮುಂತಾದ ಯಕ್ಷಗಾನ ಮೇಳಗಳು ನಮ್ಮ ಸೇವೆಯ ಆಟವನ್ನು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ನಡೆಸುತ್ತಿದ್ದು ಪಡಿಯಕ್ಕಿಯೊಂದಿಗೆ ಸಂಭಾವನೆಯನ್ನೂ ಕೊಟ್ಟು ಯಕ್ಷಗಾನಕ್ಕೆ ವಿಶೇಷ ಪ್ರೋತ್ಸಾಹವನ್ನು ನೀಡುತ್ತಾ ಬಂದಿದೆ. ಹಾಗೆಯೇ ಅನೇಕ ಹವ್ಯಾಸಿ ಯಕ್ಷಗಾನ ಸಂಘಗಳು ಹಾಗೂ ಯಕ್ಷ ಶಿಕ್ಷಣ ಟ್ರಸ್ಟ್ ,ಉಡುಪಿ ಇವರಿಗೆ ಉತ್ಸವ ಹಾಗೂ ವಿಶೇಷ ದಿನಗಳಲ್ಲಿ ಪ್ರದರ್ಶನಕ್ಕೆ ಅವಕಾಶ ನೀಡಿ ಅನುದಾನವನ್ನ ಕೊಡುವುದರೊಂದಿಗೆ ಪ್ರೋತ್ಸಾಹಿಸುತ್ತಾ ಬಂದಿದೆ ಎಂದು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಆಡಳಿತ ಧರ್ಮದರ್ಶಿ ಕೆ. ರಮಣ ಉಪಾಧ್ಯಾಯ ಹೇಳಿದರು.
ಅವರು ದೇವಳದ ಪ್ರಸನ್ನ ಮಂಟಪ ವೇದಿಕೆಯಲ್ಲಿ ನೂತನವಾಗಿ ನಿರ್ಮಾಣವಾದಂತಹ ಮಿಥುನ್ ದೇವಾಡಿಗ ತೆಕ್ಕಟೆ ಇವರ ಸಂಚಾಲಕತ್ವದ ಶ್ರೀ ಪರ್ಣ ಯಕ್ಷ ಬಳಗ, ತೆಕ್ಕಟ್ಟೆ ಹವ್ಯಾಸಿ ಯುವ ಯಕ್ಷಗಾನ ಸಂಘದ ಪ್ರಥಮ ಸೇವೆಯಾಟವನ್ನು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿ ಯುವ ಕಲಾವಿದರು ಹಾಗೂ ನೂತನ ಕಲಾಸಂಘಕ್ಕೆ ಶುಭ ಹಾರೈಸಿ ಆಶೀರ್ವದಿಸಿದರು.

ಯಕ್ಷ ಸಂಘಟಕ ಕೊಮೆ ವೆಂಕಟೇಶ ವೈದ್ಯರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕಲೆಯೊಂದಿಗೆ ಉತ್ತಮ ಕಲಿಕೆಯಲ್ಲೂ ತಮ್ಮನ್ನು ತೊಡಗಿಸಿಕೊಳ್ಳುವಂತೆ ಕರೆ ಕೊಟ್ಟು ಯುವ ಕಲಾವಿದರನ್ನು ಪ್ರೋತ್ಸಾಹಿಸಿದರು. ಅಮಿತ್ ಬಿ. ನೇರಳಕಟ್ಟೆ ಹಾಗೂ ರಾಜಾರಾಮ ಉಪಾಧ್ಯಾಯ ಕ್ರಮವಾಗಿ ಈ ಯಕ್ಷಗಾನ ಸಂಘವು ಹುಟ್ಟಿ ಬೆಳೆದ ಬಗ್ಗೆ ಹಾಗೂ ದೇವಳದ ವತಿಯಿಂದ ಯಕ್ಷಗಾನಕ್ಕೆ ಕೊಡುವ ಪ್ರೋತ್ಸಾಹದ ಬಗ್ಗೆ ಪ್ರಸ್ತಾವನೆ ಮಾಡಿದರು.
ಮುಖ್ಯ ಅತಿಥಿಯಾಗಿ ಕುಂದಪ್ರಭ ಪತ್ರಿಕೆಯ ಸಂಪಾದಕ ಯು.ಎಸ್. ಶಣೈ , ದೇವಳದ ಮ್ಯಾನೇಜರ್ ನಟೇಶ್ ಕಾರಂತ್ ಇದ್ದರು. ಜ್ಯೋತಿ ಸಾಲಿಗ್ರಾಮ ಕಾರ್ಯಕ್ರಮವನ್ನು ನಿರೂಪಿಸಿ, ಧನ್ಯವಾದ ಸಮರ್ಪಿಸಿದರು.















