ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರನ್ನು ಭೇಟಿ ಮಾಡಿ ಕ್ಷೇತ್ರದ ಸಮಸ್ಯೆಗಳು, ರೈತರು ಮತ್ತು ಗ್ರಾಮೀಣ ಬಡ ಜನರಿಗೆ ಅಗತ್ಯ ಮೂಲ ಸೌಕರ್ಯ ಹಾಗೂ ಬಾಕಿ ಉಳಿದಿರುವ ಹಕ್ಕು ಪತ್ರಗಳು, ಮಂಜೂರಾತಿ ಪತ್ರಗಳನ್ನು ಒದಗಿಸಲು ಇರುವ ಅಡೆ ತಡೆ ನಿವಾರಿಸುವ ಸಂಬಂಧ ಚರ್ಚಿಸಿದರು.

ಕ್ಷೇತ್ರದ ಸಮಸ್ಯೆಗಳ ಕುರಿತು ಸೆಪ್ಟೆಂಬರ್ ತಿಂಗಳಿನಲ್ಲಿ ಜನಪ್ರತಿನಿಧಿಗಳ ನಿಯೋಗದೊಂದಿಗೆ ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿದ ಶಾಸಕರು ಕುಂದಾಪುರ ತಾಲೂಕಿನ ಉಳ್ಳೂರು-74 ಗ್ರಾಮದಲ್ಲಿ ಡೀಮ್ಡ್ ಫಾರೆಸ್ಟ್ ಸಮಸ್ಯೆಯ ಬಗ್ಗೆ ಗಮನ ಸೆಳೆದಿದ್ದರು. ಸರಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದರೂ ಹಕ್ಕು ಪತ್ರ ಸಿಗದೇ ಇರುವುದು, ಅಕ್ರಮ ಸಕ್ರಮ ಅರ್ಜಿಗಳು ಇದರಿಂದ ತನಿಖೆಗೆ ಬಾಕಿಯಾಗಿರುವ ಕಾರಣ ಜನ ಸಾಮಾನ್ಯರು ಅನುಭವಿಸುತ್ತಿರುವ ಸಂಕಷ್ಟಗಳನ್ನು ನಿವಾರಿಸಲು ಮಾಡಿದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಬಾಕಿ ಉಳಿದಿದ್ದ ಅಡೆ ತಡೆಗಳನ್ನು ನಿವಾರಿಸಿ ಅಂತಿಮ ಆದೇಶ ಹೊರಡಿಸಿದಕ್ಕಾಗಿ ಜಿಲ್ಲಾಧಿಕಾರಿಗೆ ಧನ್ಯವಾದಗಳನ್ನು ಸಲ್ಲಿಸಿದರು. ಇದಕ್ಕಾಗಿ ಶ್ರಮಿಸಿರುವ ಕುಂದಾಪುರ ಉಪ ವಿಭಾಗಾಧಿಕಾರಿಗಳು, ತಹಸೀಲ್ದಾರರು ಹಾಗೂ ಇದಕ್ಕಾಗಿ ಹಲವು ವರ್ಷಗಳಿಂದ ಹೋರಾಟ ಕೊಟ್ಟ ಸ್ಥಳೀಯ ಜನಪ್ರತಿನಿಧಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಪ್ರಸ್ತುತ ಉಳ್ಳೂರು -74 ಗ್ರಾಮದ ಸರ್ವೇ ನಂಬ್ರ 153 ರಲ್ಲಿ ಇದ್ದ 1800 ಎಕ್ರೆ ಪೈಕಿ 150 ಎಕ್ರೆ ಅರಣ್ಯ ಭೂಮಿ ಹೊರತು ಪಡಿಸಿ ಬಾಕಿ ಉಳಿದಿರುವ ಕಂದಾಯ ಭೂಮಿಯಲ್ಲಿ ಹಲವಾರು ವರ್ಷಗಳಿಂದ ಮನೆ ಕಟ್ಟಿ ವಾಸವಿರುವವರಿಗೆ 94ಸಿ ಅಡಿ ಹಕ್ಕು ಪತ್ರ ಹಾಗೂ ಹಲವು ವರ್ಷಗಳಿಂದ ಕೃಷಿ ಮಾಡಿ ಕೊಂಡು ಬಂದಿರುವ ಅರ್ಹ ರೈತರಿಗೆ ಅಕ್ರಮ ಸಕ್ರಮದಡಿ ಭೂ ಮಂಜೂರಾತಿಗೆ ಅಗತ್ಯ ಕ್ರಮವನ್ನು ತ್ವರಿತವಾಗಿ ಕೈಗೊಳ್ಳಲು ಹಾಗೂ ಇದೇ ರೀತಿ ಕ್ಷೇತ್ರದ ಇತರೆ ಕಡೆಯೂ ಇರುವ ಡೀಮ್ಡ್ ಫಾರೆಸ್ಟ್ ಜಂಟಿ ಸರ್ವೇ ಕಾರ್ಯ ತ್ವರಿತ ಗೊಳಿಸಲು ಹಾಗೂ ಕೊಲ್ಲೂರು ಗ್ರಾಮದ 121 ಹಾಗೂ 56 ಸರ್ವೇ ನಂಬ್ರ ಗಳಲ್ಲಿನ ಸಮಸ್ಯೆ ಹಾಗೂ ಜಡ್ಕಲ್ ಮುದೂರು ಪ್ಲಾಟಿಂಗ್ ಸಮಸ್ಯೆಯನ್ನು ಆದಷ್ಟು ಬೇಗ ನಿವಾರಿಸಲು ಅಗತ್ಯ ಕ್ರಮ ವಹಿಸಲು ಮನವಿ ಮಾಡಿದರು.










