ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಕಿರಿಮಂಜೇಶ್ವರದ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಬಹುಮಾನ ವಿತರಣಾ ಸಮಾರಂಭವು ಅದ್ಧೂರಿಯಾಗಿ ನಡೆಯಿತು.
ಜನತಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾಗಿರುವ ಗಣೇಶ್ ಮೊಗವೀರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯು ಕೇವಲ ನಾಲ್ಕು ಗೋಡೆಗೆ ಸೀಮಿತವಾಗಿರದೆ, ಅವರಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ತೋರ್ಪಡಿಸಲು ಇದೊಂದು ವೇದಿಕೆಯಾಗಿದೆ. ಜೀವನದಲ್ಲಿ ಎದುರಾಗುವ ಸೋಲು ಗೆಲುವನ್ನು ಸಮದೂಗಿಸಿಕೊಂಡು ಹೋಗುವುದನ್ನು ವಿದ್ಯಾರ್ಥಿ ಜೀವನದಲ್ಲಿಯೇ ಅಳವಡಿಸಿಕೊಳ್ಳಬೇಕು ಎಂದರು.

ಈ ಸಮಾರಂಭವನ್ನು ಉಡುಪಿ ನೌಕರರ ಸಂಘದ ಅಧ್ಯಕ್ಷರಾದ ಬಸ್ರೂರಿನ ನಿವೇದಿತ ಪ್ರೌಢಶಾಲೆಯ ಶಿಕ್ಷಕರಾದ ಪ್ರದೀಪ್ ಕುಮಾರ್ ಶೆಟ್ಟಿ ಅವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ, ವಿದ್ಯಾರ್ಥಿಗಳು ಪಠ್ಯದ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ದೈಹಿಕ ಹಾಗೂ ಮಾನಸಿಕ ಸ್ಥಿರತೆಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳನ್ನು ಭವಿಷ್ಯದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಣಿಗೊಳಿಸುವಲ್ಲಿ ಸದಾ ಈ ಸಂಸ್ಥೆಯು ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಉಡುಪಿ ಜಿಲ್ಲಾ ಪಂಚಾಯತ್‌ನ ಮಾಜಿ ಸದಸ್ಯರಾದ ಶ್ಯಾಮಲಾ ಕುಂದರ್ ಮಾತನಾಡಿ, ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ವಿದ್ಯಾರ್ಥಿಗಳಿಗೆ ಹೊಸ ಹೊಸ ಸವಾಲುಗಳನ್ನು ಒಡ್ಡಿ, ಅವರಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಮೂಡಿಸುತ್ತದೆ. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸುವುದರಿಂದ ಅವರಲ್ಲಿನ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಉಪಸ್ಥಿತರಿದ್ದ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕರಾದ ಸಿಎನ್ ಬಿಲ್ಲವ ಅವರು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಔದ್ಯೋಗಿಕ ಹಾಗೂ ಬದುಕನ್ನು ಕಟ್ಟಿಕೊಳ್ಳಲು ಅನುಕೂಲವಾಗುವ ಶಿಕ್ಷಣ ಸಂಸ್ಥೆ ಇದಾಗಿದೆ. ಮಕ್ಕಳಲ್ಲಿರುವ ಪ್ರತಿಭೆಯನ್ನು ರಾಷ್ಟ್ರಮಟ್ಟಕ್ಕೆ ಮುಟ್ಟಿಸುವಲ್ಲಿ ಈ ಸಂಸ್ಥೆಯು ಕಾರ್ಯಪ್ರವರ್ಥವಾಗಿದೆ ಎಂದರು.
ಜನತಾ ಪದವಿಪೂರ್ವ ಕಾಲೇಜಿನ ಸ್ಪರ್ಧಾತ್ಮಕ ಪರೀಕ್ಷೆಗಳ ವಿಶೇಷ ತರಬೇತುದಾರರಾದ ಅಭಿಲಾಷ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ನಮ್ಮೆಲ್ಲ ಆಸೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಮನಸ್ಸು ನಮ್ಮಲ್ಲಿರಬೇಕು. ಸತತ ಪ್ರಯತ್ನದ ಜೊತೆಗೆ ವಾಸ್ತವತೆ ಬಗ್ಗೆ ತಿಳಿದಿರಬೇಕು, ಸಂಘಟನಾ ಕೌಶಲ್ಯ ಮತ್ತು ವ್ಯಾವಹಾರಿಕ ಜ್ಞಾನವನ್ನು ರೂಢಿಸಿಕೊಳ್ಳಬೇಕು. ಪ್ರತಿಯೊಬ್ಬರನ್ನು ಗೌರವಿಸಬೇಕು ಹಾಗೆಯೇ ನ್ಯಾಯಯುತ ದಾರಿಯಲ್ಲಿ ನಡೆಯಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ನಾವುಂದ ಗ್ರಾಮ ಪಂಚಾಯತನ ಸದಸ್ಯರಾಗಿರುವ ಮುತ್ತು ಪುತ್ರನ್, ಬೈಂದೂರಿನ ಇಸಿಒ ಆಗಿರುವ ಸತ್ಯನಾ ಕೊಡೇರಿ, ಕಿರಿಮಂಜೇಶ್ವರ ಕ್ಲಸ್ಟರ್ ನ ಸಂಪನ್ಮೂಲ ವ್ಯಕ್ತಿಯಾದ ಗಣೇಶ್ ಪೂಜಾರಿ, ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ನ ಸದಸ್ಯರುಗಳಾದ ಜಯಲಕ್ಷ್ಮೀ ಮತ್ತು ಸರಸ್ವತಿ ನೈರಿ ಹಾಗೂ ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿಯಾದ ಉದಯ್ ನಾಯ್ಕ ಇವರುಗಳು ವೇದಿಕೆಯಲ್ಲಿದ್ದು ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಿ ಶುಭ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಪೋಷಕರು, ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಶಾಲೆಯ ಶಿಕ್ಷಕ /ಶಿಕ್ಷಕೇತರ ವೃಂದದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಮುಖ್ಯ ಶಿಕ್ಷಕಿಯಾಗಿರುವ ದೀಪಿಕಾ ಆಚಾರ್ಯ ಸ್ವಾಗತಿಸಿ, ಸಹಶಿಕ್ಷಕರಾಗಿರುವ ನಾಗರಾಜ್ ಹೆಮ್ಮಾಡಿ ಹಾಗೂ ರಮ್ಯಾ ನಿರೂಪಿಸಿ, ಸಂಯೋಜಕರಾಗಿರುವ ಸುಬ್ರಮಣ್ಯ ಮರಾಠಿ ಅವರು ವಂದಿಸಿದರು.















