ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಆಧುನಿಕ ತಂತ್ರಜ್ಞಾನ ಯುಗದಲ್ಲಿ ದಿನಕ್ಕೆ ಹೊಸ ಹೊಸ ಆವಿಷ್ಕಾರಗಳಾಗುತ್ತಿದೆ. ಕೆಲವು ಹೊಸ ತಾಂತ್ರಿಕ ಜ್ಞಾನವು ಮನುಷ್ಯನ ಬದುಕಿಗೆ ಮಾರಕವಾಗುತ್ತಿವೆ ಎಂದು ಉಡುಪಿ ಮಹಾತ್ಮ ಗಾಂಧಿ ಮೆಮೋರಿಯಲ್ ಸಂಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ದೇವಿದಾಸ ನಾಯಕ್ ಹೇಳಿದರು.
ಅವರು ಶನಿವಾರ ಇಲ್ಲಿನ ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಇಂದಿನ ದಿನಗಳಲ್ಲಿ ನಾವು ಉಪಯೋಗಿಸುವ ಹೊಸ ತಂತ್ರಜ್ಞಾನವನ್ನು ಒಳ್ಳೆಯ ಉದ್ದೇಶಕ್ಕೆ ಬಳಸಬೇಕು. ಆದರೆ ಅದನ್ನು ವಿರುದ್ಧ ನೆಲೆಯಲ್ಲಿ ಉಪಯೋಗಿಸಿದರೆ ವೈಯಕ್ತಿಕ ಮತ್ತು ಸಾಮಾಜಿಕ ದೃಷ್ಟಿಯಲ್ಲಿಯೂ ಮಾರಕವಾದ ಪರಿಣಾಮ ಬೀರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಸ್ತುತದ ಯುಗದಲ್ಲಿ ನಮ್ಮ ಯುವಜನತೆಗೆ ಜೀವನ ಮೌಲ್ಯಗಳು ಅಗತ್ಯವಾಗಿ ಬೇಕಾಗಿದೆ. ಅದಕ್ಕೆ ಪೂರಕವಾಗಿ ಸತತ ಪ್ರಯತ್ನ, ಶಿಸ್ತು ಬದ್ಧತೆ ಮತ್ತು ಸಮಗ್ರತೆ ಈ ಮೂರು ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಅತ್ಯುತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಯಶಸ್ವೀ ಸಾಧನೆಯ ಮೂಲಕ ಸಮಾಜಕ್ಕೆ ನಿಮ್ಮ ಅತ್ಯುತ್ತಮ ಕೊಡುಗೆಯನ್ನು ನೀಡಬೇಕು ಎಂದು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ ಹುಬ್ಬಳ್ಳಿ -ಧಾರವಾಡ ನಗರ ಅಪರಾಧ ವಿಭಾಗದ ಪೋಲೀಸ್ ಸಬ್ ಇನ್ಸ್ಪೆಕ್ಟರ್ ಪುನೀತ್ ಕುಮಾರ್ ಮಾತನಾಡಿ, ಯುವಜನತೆ ಪಾಲಿಸಬೇಕಾದ ನಿಯಮಗಳ ಕುರಿತು ಮತ್ತು ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಉಪಾಧ್ಯಕ್ಷರಾದ ಕೆ. ಶಾಂತಾರಾಮ್ ಪ್ರಭು ಮಾತನಾಡಿ, ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾದದ್ದು. ಅವಕಾಶಗಳು ಚೆನ್ನಾಗಿ ಉಪಯೋಗಿಸುವ ಮೂಲಕ ಉತ್ತಮ ಜೀವನ ರೂಪಿಸಿಕೊಳ್ಳಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ರಾಜೇಂದ್ರ ತೋಳಾರ್, ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ಉಪಸ್ಥಿತರಿದ್ದರು. ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ.ಎಮ್. ಗೊಂಡ ಕಾಲೇಜು ವಾರ್ಷಿಕ ವರದಿ ವಾಚಿಸಿದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಸರೋಜ ಎಂ., ದೈಹಿಕ ನಿರ್ದೇಶಕರಾದ ಶಂಕರನಾರಾಯಣ ಉಪನ್ಯಾಸಕರಾದ ಪ್ರಸನ್ನ, ಸ್ಮಿತಾ, ಡೊಮ್ನಿಕ್ ಬ್ರಗಾಂಜ, ವಿದ್ಯಾಧರ ಪೂಜಾರಿ, ಅಕ್ಷತಾ ಶೇಟ್ ಸಾಧಕ ವಿದ್ಯಾರ್ಥಿಗಳ ಮತ್ತು ಬಹುಮಾನ ವಿಜೇತರ ಪಟ್ಟಿ ವಾಚಿಸಿದರು.
ವಿದ್ಯಾರ್ಥಿನಿಯರಾದ ಪಲ್ಲವಿ ಕಾರ್ಯಕ್ರಮ ನಿರೂಪಿಸಿ, ರೋಚನಾ ಮತ್ತು ಸಭಾ ಅತಿಥಿಗಳನ್ನು ಪರಿಚಯಿಸಿದರು. ಅಮೂಲ್ಯ ವಂದಿಸಿದರು.















