ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಕ್ಕಳಿಗೆ ಬಾಲ್ಯದಿಂದಲೇ ನಮ್ಮ ಕೌಟುಂಬಿಕ ವ್ಯವಸ್ಥೆಗಳು, ಸಂಸ್ಕೃತಿ, ಸಂಸ್ಕಾರಗಳ ಬಗ್ಗೆ ತಿಳಿಸಬೇಕು. ದೇಶದಲ್ಲಿನ ಪದ್ಧತಿ, ಅನ್ಯೋನ್ಯತೆ ಉಳಿದರೆ ಮಾತ್ರ ದೇಶ ಉಳಿಯುತ್ತದೆ. ದೇಶದ, ಸಮಾಜದ ಬೆಳವಣಿಗೆಗೆ ಪ್ರತಿಯೊಂದು ಸಮಾಜದ ಕೊಡುಗೆ ಇದೆ. ಜಾತಿ ಮನೆಯ ಹಾಗೂ ಸಮಾಜದ ಸಾಮರಸ್ಯ, ಸ್ವಾಸ್ಥ್ಯವನ್ನು ಗಟ್ಟಿ ಮಾಡಬೇಕೇ ಹೊರತು ಅದರ ಹೆಸರಿನಲ್ಲಿ ಬೇಧ ಮಾಡಬಾರದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಸಹ ಕಾರ್ಯವಾಹ ಹರಿಕೃಷ್ಣ ಹೇಳಿದರು.

ಅವರು ಸೇವಾ ಸಂಗಮ ಟ್ರಸ್ಟ್ ಕುಂದಾಪುರ ಇವರ ಆಶ್ರಯದಲ್ಲಿ ಕುಂದಾಪುರ ರೋಟರಿ ಲಕ್ಷ್ಮೀ ನರಸಿಂಹ ಕಲಾ ಮಂದಿರದಲ್ಲಿ ಭಾನುವಾರ ನಡೆದ ಬಾಲಸಂಗಮ- ಮಾತೃಸಂಗಮ 2026 ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ವಕ್ತಾರರಾಗಿ ಮಾತನಾಡಿದರು. ಪ್ರಕೃತಿ ಉಳಿಸುವ ಜವಾಬ್ದಾರಿ ಎಲ್ಲರದ್ದಾಗಬೇಕು. ಸ್ವದೇಶಿ ವಸ್ತುಗಳನ್ನು ಉಪಯೋಗಿಸಿದರೆ ದೇಶದ ಏಳಿಗೆ, ಪ್ರಗತಿ ಸಾಧ್ಯವಿದೆ. ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳನ್ನು ಮತ್ತು ತಾಯಂದಿರನ್ನು ಗೌರವಿಸಿ ಪೂಜೆ ಮಾಡುತ್ತೇವೆ. ಮಕ್ಕಳ ಮುಂದಿನ ಭವಿಷ್ಯ ರೂಪಿಸುವಲ್ಲಿ ತಾಯಂದಿರ ಪಾತ್ರ ಮಹತ್ವದ್ದಾಗಿದೆ ಎಂದು ಅಭಿಪ್ರಾಯಪಟ್ಟರು.
ಸೇವಾ ಸಂಗಮ ಟ್ರಸ್ಟ್‌ನ ನಿರ್ವಾಹಕ ವಿಶ್ವಸ್ಥ ಸುಬ್ರಹ್ಮಣ್ಯ ಹೊಳ್ಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಮಾಜಿ ಅಧ್ಯಕ್ಷೆ ಪೂರ್ಣಿಮಾ ಭವಾನಿಶಂಕರ ಶುಭ ಹಾರೈಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುಂದಾಪುರ ತಾಲೂಕು ಸಂಘಚಾಲಕ ರವಿಚಂದ್ರ ಶೆಟ್ಟಿ ಶೋಭಾಯಾತ್ರೆಗೆ ಚಾಲನೆ ನೀಡಿದರು. ಮಕ್ಕಳಿಗೆ ಹಾಗೂ ಮಾತೆಯರಿಗೆ ವಿವಿಧ ಸ್ಪರ್ಧೆಗಳ ನಡೆದವು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸೇವಾ ಸಂಗಮ ಟ್ರಸ್ಟ್‌ನ ವಿಶ್ವಸ್ಥ ಕಾರ್ಯದರ್ಶಿ ಚಂದ್ರಿಕಾ ಧನ್ಯ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿಸ್ವಸ್ಥ ಡಾ. ಸುರೇಂದ್ರ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ವಿಶ್ವಸ್ಥೆ ಕಲ್ಪನಾ ಭಾಸ್ಕರ ಬಹುಮಾನ ವಿಜೇತರ ಪಟ್ಟಿ ವಾಚಿಸಿ ವಂದಿಸಿದರು.










