ಕುಂದಾಪುರ: ವಿಧಾನ ಪರಿಷತ್ ಚುನಾವಣೆಯಲ್ಲಿ ದಕ್ಷಿಣಕನ್ನಡ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಸ್. ಪ್ರಕಾಶ್ ಶೆಟ್ಟಿ ಚುನಾವಣೆ ಕಣದಿಂದ ಹಿಂದೆ ಸರಿದು ಪಕ್ಷದ ಇನ್ನೋರ್ವ ಅಭ್ಯರ್ಥಿ ಪ್ರವೀಣ್ ಚಂದ್ರ ಜೈನ್ ಅವರಿಗೆ ಬೆಂಬಲ ಸೂಚಿಸಿದ್ದಾರೆ.
ಕುಂದಾಪುರ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪಕ್ಷದ ಇನ್ನೋರ್ವ ಅಭ್ಯರ್ಥಿ ಪ್ರವೀಣ್ ಚಂದ್ರ ಜೈನ್ ಅವರ ಕೈ ಬಲಪಡಿಸುವ ನಿಟ್ಟಿನಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರ ನಿರ್ದೇಶನದಂತೆ ಚುನಾವಣಾ ಕಣದಿಂದ ಹಿಂದೆ ಸರಿಯುತ್ತಿದ್ದೇನೆ. ಚುನಾವಣೆ ಕಣದಲ್ಲಿ ಅಭ್ಯರ್ಥಿ ಎಂದು ಘೋಷಿಸಿದಾಗ ಪಕ್ಷ ಹಾಗೂ ನನ್ನ ಮೇಲೆ ವಿಶ್ವಾಸವಿಟ್ಟು ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಲ್ಲದೇ ಮುಂದೆ ಪಕ್ಷ ಸಂಘಟನೆ ವಿಚಾರದಲ್ಲಿ ಹಿರಿಯರೊಂದಿಗೆ ತನ್ನನ್ನು ತೊಡಗಿಸಿಕೊಳ್ಳುವುದಾಗಿ ಹೇಳಿದರು.
ಜೆಡಿಎಸ್ ಈ ಬಾರಿ ಪರಿಷತ್ ಚುನಾವಣೆಗೆ ದಕ್ಷಿಣಕನ್ನಡ ಕ್ಷೇತ್ರದಲ್ಲಿ ಇಬ್ಬರೂ ಅಭ್ಯರ್ಥಿಗಳಿಗೆ ಸ್ಪರ್ಧೆಗಾಗಿ ಬಿ. ಫಾರ್ಮ ನೀಡಿತ್ತು, ಅಂತಿಮ ಕ್ಷಣದಲ್ಲಿ ಕೆಲವು ಬದಲಾವಣೆ ತರುವ ನಿಟ್ಟಿನಲ್ಲಿ ಪಕ್ಷಾಧ್ಯಕ್ಷರ ಸ್ವರ್ಧೆಯಿಂದ ಹಿಂದೆ ಸರಿಯುವಂತೆ ಸೂಚಿಸಿದ್ದಾರೆ. ಪಕ್ಷದ ಅಧೀಕೃತ ಅಭ್ಯರ್ಥಿ ಪ್ರವೀಣ್ ಚಂದ್ರ ಜೈನ್ ಅವರ ಗೆಲುವಿಗೆ ಶ್ರಮಿಸುತ್ತೇನೆ ಎಂದು ಪ್ರಕಾಶ್ ಶೆಟ್ಟಿ ತಿಳಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ರಶ್ವಥ್ ಶೆಟ್ಟಿ, ಪಕ್ಷದ ಹಿರಿಯ ನಾಯಕ ಬಿ.ಟಿ. ಮಂಜುನಾಥ ರಾಜ್ಯ ಮಹಿಳಾ ನಾಯಕಿ ಅನಿತಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.