ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕೋಟ ಪೊಲೀಸ್ ಠಾಣೆಯ ಠಾಣಾಧಿಕಾರಿ ಪ್ರವೀಣ್ ಕುಮಾರ್ ಆರ್. ಅವರು ಶನಿವಾರ ಬೆಳಗಿನ ಜಾವ 2:30ರ ಸುಮಾರಿಗೆ ಠಾಣಾ ಸಿಬ್ಬಂದಿಯವರೊಂದಿಗೆ ಇಲಾಖಾ ವಾಹನದಲ್ಲಿ ಸಾಲಿಗ್ರಾಮ ಕಡೆಯಿಂದ ಠಾಣೆಯ ಕಡೆಗೆ ಬರುತ್ತಿರುವಾಗ ಚಿತ್ರಪಾಡಿ ಗ್ರಾಮದ ಪರಿವರ್ತನ ಕಟ್ಟಡ ಬಳಿ ಕಪ್ಪು ಬಣ್ಣದ ರಿಡ್ಜ್ ಕಾರು ನಿಂತಿದ್ದು, ಕಾರಿನ ಹೊರಗೆ 3 ಜನ ಅನುಮಾನಿತ ವ್ಯಕ್ತಿಗಳು ನಿಂತುಕೊಂಡಿರುವುದು ಕಂಡುಬಂದಿದೆ.
ಕಾರಿನ ಬಳಿ ಹೋಗಿ ಕಾರಿನ ಹೊರಗೆ ನಿಂತಿದ್ದ ವ್ಯಕ್ತಿಯನ್ನು ವಿಚಾರಿಸಿದಾಗ ಸರಿಯಾದ ಉತ್ತರ ನೀಡಿಲ್ಲ. ಕಾರಿನ ಒಳಗೆ ನೋಡಿದಾಗ ಇಬ್ಬರು ವ್ಯಕ್ತಿಗಳು ಕುಳಿತುಕೊಂಡಿರುವುದು ಕಂಡುಬಂದಿದೆ. ಅವರು ಸರಿಯಾದ ಮಾಹಿತಿ ನೀಡದೆ ಇರದ ಕಾರಣ ತಕ್ಷಣ ಕಾರನ್ನು ಪರಿಶೀಲಿಸಿದಾಗ ಕಾರಿನ ಎದುರು ಎಡ ಬದಿಯ ಡ್ಯಾಶ್ ಬೋರ್ಡ್ ನಲ್ಲಿ ಎರಡು ಚೂರಿ ಇರುವುದು ಕಂಡುಬಂದಿದೆ. ಅಲ್ಲದೆ ಕಾರಿನ ಹಿಂದಿನ ಡಿಕ್ಕಿ ಪರಿಶೀಲಿಸಿದಾಗ ನೀರಿನಿಂದ ತೊಳೆದಿರುವುದು ಕಂಡುಬಂದಿದೆ.
ಕಾರಿನ ಡಿಕ್ಕಿಯ ಡೋರಿನಲ್ಲಿ ರಕ್ತ ಅಂಟಿದ ಕಲೆಗಳ ಜೊತೆಗೆ ಯಾವುದೋ ಪ್ರಾಣಿಯ ಕೂದಲು ಅಂಟಿಕೊಂಡಿರುವುದು ಕಂಡುಬಂದಿರುತ್ತದೆ. ಈ ಬಗ್ಗೆ ವಿಚಾರಿಸಿದಾಗ ಆರೋಪಿಗಳು ಈ ಹಿಂದೆ ಮಾಂಸಗೋಸ್ಕರ ಇದೇ ಕಾರಿನಲ್ಲಿ ದನ ಕಳ್ಳತನ ಮಾಡಿ ಅದನ್ನು ವಧೆ ಮಾಡಿ ಇದೇ ಕಾರಿನಲ್ಲಿ ತುಂಬಿಸಿಕೊಂಡು ಹೋಗಿ ಮಾಂಸವನ್ನು ಮಾರಾಟ ಮಾಡಿದ್ದು, ಆ ಸಮಯದಲ್ಲಿ ಅಂಟಿದ ರಕ್ತದ ಕಲೆಗಳಾಗಿರುವುದಾಗಿ ತಿಳಿಸಿರುತ್ತಾರೆ. ಅಲ್ಲದೆ ಇದೇ ಕಾರಿನಲ್ಲಿ ಪುನಃ ದನ ಕಳ್ಳತನ ಮಾಡಿಕೊಂಡು ಹೋಗಲು ಕೋಟ ಕಡೆಗೆ ಬಂದಿರುವುದಾಗಿ ಆರೋಪಿಗಳು ಹೇಳಿರುವುದಾಗಿ ತಿಳಿದು ಬಂದಿದೆ.
ಆರೋಪಿಗಳಾದ ಹೂಡೆ ಪಡುತೋನ್ಸೆಯ ಮಹಮ್ಮದ್ ಮುಫೀದ್ (22), ಮಹಮ್ಮದ್ ರಿಯಾನ್ (21), ಆದೀಬ್ ಅಹ್ಮಮದ್ (21) ಹಾಗೂ ಇಬ್ಬರು ಅಪ್ರಾಪ್ತ ಬಾಲಕರು ಸೇರಿ ಐವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.










