ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಅಡಿಕೆ ಮರವೇರಿ ಸಿಂಗಾರ ಹೂವು ಕೊಯ್ಯುವಾಗ ಮರ ತುಂಡಾಗಿ ಕಾರ್ಮಿಕ ಕೆಳಗೆ ಬಿದ್ದ ಮೃತಪಟ್ಟ ಘಟನೆ ಸೋಮವಾರ ಸಾಲಿಗ್ರಾಮ ಸಮೀಪ ಗುಂಡ್ಮಿಯಲ್ಲಿ ಸಂಭವಿಸಿದೆ.
ಗುಂಡ್ಮಿ ನಿವಾಸಿ ಶ್ರೀನಿವಾಸ ಪೂಜಾರಿ (45) ಮೃತಪಟ್ಟ ವ್ಯಕ್ತಿ.
ಅವರು ತೆಂಗಿನಮರ ಮತ್ತು ಅಡಿಕೆ ಮರ ಹತ್ತಿ ಕಾಯಿ ಹಾಗೂ ಅಡಿಕೆ ಕೊಯ್ಯುವ ಕೆಲಸ ಮಾಡಿಕೊಂಡಿದ್ದರು. ಸೋಮವಾರ ಬೆಳಗ್ಗೆ ಗುಂಡ್ಮಿ ಗ್ರಾಮದ ಕಾಶ್ಮೀರಿ ಎಂಬಲ್ಲಿ ಪದ್ಮನಾಭ ಹೊಳ್ಳ ಎನ್ನುವವರ ಮನೆಯಲ್ಲಿ ಅಡಿಕೆ ಮರದ ಸಿಂಗಾರ ಹೂವು ತೆಗೆಯಲು ಹೊಗಿದ್ದ ಸಂದರ್ಭ ಮರವೇರಿದ್ದಾಗ ಅಡಿಕೆ ಮರ ತುಂಡಾಗಿದ್ದು ಸಮೀಪದಲ್ಲಿದ್ದ ನಾಗನ ಕಟ್ಟೆಯ ಮಾಡಿನ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ತಕ್ಷಣ ಕೋಟ ಸರಕಾರಿ ಆಸ್ಪತ್ರೆಗೆ ಕರೆತರಲಾಯಿತು ಆದರೆ ಅಷ್ಟರೊಳಗೆ ಮೃತಪಟ್ಟಿದ್ದರು.
ಅವರು ಮನೆಗೆ ಆಧಾರಸ್ತಂಭವಾಗಿದ್ದು ಕಾಯಿ ತೆಗೆಯಲು ಹಾಗೂ ಸಿಂಗಾರ ಹೂವು ತೆಗೆಯುವ ಕೆಲಸದಲ್ಲಿ ಸಾಕಷ್ಟು ಹೆಸರುಗಳಿಸಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತಿಯರನ್ನು ಅಗಲಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
















