ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಹಟ್ಟಿಅಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಭಗವದ್ಗೀತೆಯ ಸಂದೇಶಗಳ ಪರಿಚಯಕ್ಕಾಗಿ ’ಗೀತಾ ಸಂದೇಶ ಸಾರ’ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಗೀತಾಜ್ಞಾನ ಯಜ್ಞ ವೇದಿಕೆಯ ಪ್ರಧಾನ ಗುರುಗಳಾದ ಸುಬ್ರಾಯ ನಂದೋಡಿ, ಕಾಸರಗೋಡು ಅವರು ಆಗಮಿಸಿದ್ದರು. ಪಂಚಾಂಗಪಠನವನ್ನು ವೀಕ್ಷಾ ನಡೆಸಿದರೆ, ಕೃಪಾಲಿ ಗೀತಾಮಹಾತ್ಮ್ಯೆಯನ್ನು ಪಠಿಸಿದರೆ, ಮಯೂರ ಜ್ಞಾನಕಿರಣವನ್ನು ಪಠಿಸಿದನು.
ನಂತರ ಗೀತಾ ಜ್ಞಾನ ಯಜ್ಞದ ಪ್ರಧಾನ ಗುರುಗಳಾದ ಸುಬ್ರಾಯ ನಂದೋಡಿ ಅವರು ಮಾತನಾಡಿ, ಜೀವನವನ್ನು ಬೆಳಗಿಸುವ ಗ್ರಂಥ ಭಗವದ್ಗೀತೆ. ಚಂಚಲವಾದ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಪ್ರತಿಯೊಬ್ಬ ವ್ಯಕ್ತಿಯೂ ದೇಶದ ಶಕ್ತಿಯಾಗಬೇಕು. ಸ್ವಾತಂತ್ರ್ಯ ಪಡೆದ ಶತಮಾನೋತ್ಸವದಲ್ಲಿ ಭಾರತ ದೇಶದ ಪ್ರತಿಯೊಬ್ಬ ನಾಗರಿಕನೂ ಭಗವದ್ಗೀತೆಯ ಜ್ಞಾನವನ್ನು ಹೊಂದಿದವನಾಗಬೇಕು. ಮನೆ ಮನೆಗಳಲ್ಲೂ ನಿತ್ಯ ಭಗವದ್ಗೀತೆಯ ಅಧ್ಯಯನ ಆಗಬೇಕು ಎಂದರು.
ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಮತ್ತು ಶಾಲಾ ಪ್ರಾಂಶುಪಾಲರಾದ ಶರಣ ಕುಮಾರ ಮಾತನಾಡಿ, ವಿದ್ಯೆಯನ್ನು ಜೀವನದ ಬಾಲ್ಯದಲ್ಲಿ ಹೊಂದಿದರೆ ಸಾಧಿಸುವಾತಗೆ ಸಾವಿರಾರು ಅವಕಾಶಗಳು ಬಂದೊದಗುತ್ತವೆ. ತಾನು, ತನ್ನ ಮನೆ, ತನ್ನ ಊರು, ತನ್ನ ರಾಜ್ಯ, ತನ್ನ ದೇಶ ಎಂದು ಪ್ರತಿಯೊಂದು ಸ್ತರದಲ್ಲೂ ಅಭಿವೃದ್ಧಿಗೊಳಿಸಬಹುದು. ಭಗವದ್ಗೀತೆ ಅಮೂಲ್ಯವಾದ ಭಾರತೀಯ ತತ್ತ್ವಗಳ ಸಂಗ್ರಹ. ಅದರ ಅಧ್ಯಯನವನ್ನು ಬಾಲ್ಯದಲ್ಲಿಯೇ ನಡೆಸಬೇಕು ಎಂದರು. ವಿದ್ಯಾರ್ಥಿ ಶ್ರೀ ವತ್ಸ ಅಡಿಗ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಆಡಳಿತಾಧಿಕಾರಿಗಳಾದ ವೀಣಾ ರಶ್ಮಿ ಎಮ್., ಶಾಲಾ ಉಪಪ್ರಾಂಶುಪಾಲರಾದ ರಾಮ ದೇವಾಡಿಗ, ಶಿಕ್ಷಕ ಶಿಕ್ಷಕೇತರವೃಂದದವರು ಭಾಗವಹಿಸಿದ್ದರು.















