ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಕಂಡ್ಲೂರು ಬ್ರಿಡ್ಜ್ ಸೇತವೆ ಬಳಿ ವಾರಾಹಿ ನದಿಯಲ್ಲಿ ನಡೆಯುತ್ತಿದ್ದ ಅಕ್ರಮವಾಗಿ ಮರಳುಗಾರಿಕೆಗೆ ಫೆ.10ರಂದು ಬೆಳಗಿನ ಜಾವ ದಾಳಿ ನಡೆಸಿದ ಪೊಲೀಸರು 11 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಕುಂದಾಪುರ ವೃತ್ತ ಪೊಲೀಸ್ ನಿರೀಕ್ಷಕರಾದ ಸಂತೋಷ ಎ. ಕಾಯ್ಕಿಣಿ ಅವರಿಗೆ ಬಂದ ಮಾಹಿತಿಯಂತೆ ರಾತ್ರಿ 2 ಗಂಟೆಗೆ ದಾಳಿ ನಡೆಸಿದಾಗ ವರಾಹಿ ನದಿಯಿಂದ ಮರಳನ್ನು ತೆಗೆದು ದೋಣಿಯಲ್ಲಿ ಪೊದೆಯ ಕಡೆಗೆ ತೆಗೆದುಕೊಂಡು ಹೋಗಿ ನಿಲ್ಲಿಸಿ ಅಡಗಿಕೊಂಡರು. ಸಮೀಪದ ಮರಳು ಧಕ್ಕೆಯಾದ ಕೆ.ಆರ್.ಐ.ಡಿ.ಎಲ್ ಮರಳು ಧಕ್ಕೆಗೆ ಹೋಗಿ ಅಲ್ಲಿಂದ ದೋಣಿಯಲ್ಲಿ ಹೋದ ಪೊಲೀಸರು ಆರೋಪಿಗಳು ದೋಣಿ ನಿಲ್ಲಿಸಿದ ಸ್ಥಳಕ್ಕೆ ಹೋಗಿ ಮರಳು ತುಂಬಿದ 4 ದೋಣಿಗಳನ್ನು ಹಾಗೂ ಅದರಲ್ಲಿದ್ದ ಆಪಾದಿತರನ್ನು ಕರೆದುಕೊಂಡು ಬಂದರು.

ಹಳ್ನಾಡು ಮರಳು ಧಕ್ಕೆಯಲ್ಲಿ ಆರೋಪಿಗಳನ್ನು ವಿಚಾರಿಸಿದಾಗ, ಆರೋಪಿಗಳು ಹಳ್ನಾಡು ಮರಳು ಧಕ್ಕೆಯಲ್ಲಿ ಕೆಲಸದವರಾದ ರಾಮಶಂಕರ ರಾಜಬೀರ್ (35), ರಾಮ ಕುಮಾರ್ (40) ಗೋವಿಂದ ಚೌದರಿ (26), ಶಿವಮುನಿ (32), ಜುನ್ನ ರಾಜಬೀರ್ (35), ಸತ್ಯಾದೇವ (30), ಕಮಲೇಶ ನಿಸಾದ್ (35), ಸಂತೋಷ ನಿಸಾದ್ (23), ಓಂ ಪ್ರಕಾಶ ರಾಜಬರ್ (34), ರಮೇಶ ರಾಜಬರ್ (35), ಮರಳು ಧಕ್ಕೆಯ ಮಾಲಿಕರಾದ ಸುನಿಲ್ ಶೆಟ್ಟಿ ಹಾಗೂ ದಕ್ಕೆಯ ಸುಪರ್ ವೈಸರ್ ಆದ ಅಜ್ಮಲ್ ಸೇರಿದಂತೆ 11 ಜನ ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ದಾಳಿ ವೇಳೆ 4 ದೋಣಿ, ದೋಣಿಗಳಲ್ಲಿದ್ದ 4,500 ರೂ ಮೌಲ್ಯದ ಒಟ್ಟು ಸುಮಾರು 3 ½ ಯುನಿಟ್ ಮರಳನ್ನು ವಶಪಡಿಸಿಕೊಳ್ಳಲಾಗಿದೆ.










