ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶ್ರೀ ವೇದಮೂರ್ತಿ ರಾಮಚಂದ್ರ ಭಟ್ಟರ ಸ್ಮರಣಾರ್ಥ ಆರಾಧನೆ ಕಾರ್ಯಕ್ರಮದ ಭಾಗವಾಗಿ ಹತ್ತನೇ ತರಗತಿಯ ವಿದ್ಯಾರ್ಥಿಗಳು ತಮ್ಮ ತಾಯಿ-ತಂದೆಯರ ಆಶೀರ್ವಾದವನ್ನು ಪಡೆಯಲು ’ನಮಾಮಿ ಶಕ್ತಿಚರಣಮ್’ ಎಂಬ ಹೆಸರಿನಲ್ಲಿ ಮಾತೃವಂದನಾ ಕಾರ್ಯಕ್ರಮವು ನೆರವೇರಲ್ಪಟ್ಟಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ತಂದೆ ತಾಯಿಗಳ ಪಾದ ತೊಳೆದು, ಆರತಿ ಬೆಳಗಿ, ಗೌರವಿಸಿದರು.
ಬಾರ್ಕೂರಿನ ಖ್ಯಾತ ವಾಗ್ಮಿಗಳಾದ ಎನ್. ಆರ್. ದಾಮೋದರ ಶರ್ಮರು ಪೋಷಕರು ಮತ್ತು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ಭಾರತ ದೇಶವನ್ನು ವೇದಗಳು ಮತ್ತು ಇತಿಹಾಸಗಳು ಕರ್ಮದ ನೆಲ, ಧರ್ಮದ ನೆಲ ಹಾಗೂ ಸಾಧನೆಯ ನೆಲವೆಂದು ಕೊಂಡಾಡಿವೆ. ಇಲ್ಲಿ ಜನಿಸುವ ಜನರು ಮೌಲ್ಯಗಳನ್ನೊಳಗೊಂಡ ಭಾವನಾತ್ಮಕ ಜೀವನ ನಡೆಸುತ್ತಾರೆ. ನಮ್ಮ ದೇಶವು ಉತ್ತಮವಾಗಿ ಅಭಿವೃದ್ಧಿ ಹೊಂದಬೇಕಾದರೆ ವಿದ್ಯಾರ್ಥಿಗಳಲ್ಲಿ ಸತ್ಸಂಸ್ಕಾರ ಹಾಗೂ ಉತ್ತಮ ಗುಣಗಳನ್ನು ಬೆಳೆಸುವುದು ಅಗತ್ಯ. ಮಕ್ಕಳಿಗೆ ಭಾರತೀಯ ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ಸ್ಪಷ್ಟ ಜ್ಞಾನ ನೀಡಬೇಕು.
ಇತಿಹಾಸವನ್ನು ಅರಿತ ವ್ಯಕ್ತಿಯು ಭವಿಷ್ಯವನ್ನು ದೃಢವಾಗಿ ನಿರ್ಮಿಸಬಹುದು. ಮಕ್ಕಳು ’ಮಾತೃದೇವೋ ಭವ’ ಎಂಬ ಮಹತ್ವದ ಮಾತಿನ ಅರ್ಥವನ್ನು ತಿಳಿದುಕೊಳ್ಳಬೇಕು. ಯಾವ ಮಹತ್ತರ ಸಾಧನೆ ಮಾಡಿದರೂ ಮಗನು ತಾಯಿಗೆ ಮಗನೇ ಆಗಿರುತ್ತಾನೆ. ಮಕ್ಕಳ ಯಶಸ್ಸಿನ ಹಿಂದೆ ತಾಯಿಯ ಪ್ರೋತ್ಸಾಹ ಮತ್ತು ತ್ಯಾಗ ಸದಾ ಇರುತ್ತದೆ. ನಮಗಾಗಿ ತನ್ನ ಜೀವವನ್ನೇ ಪಣಕ್ಕಿಟ್ಟ ತಾಯಿ ದೇವಿಯಂತೆ ಪೂಜ್ಯಳು. ತಂದೆ-ತಾಯಿಯರಲ್ಲಿ ದೇವರನ್ನು ಕಂಡ ಶ್ರವಣಕುಮಾರನ ಭಕ್ತಿ ನಮಗೆ ಮಾದರಿಯಾಗಿದೆ.
ಬೀಸುವ ಗಾಳಿ, ನಿಂತಿರುವ ನೆಲ, ತಿನ್ನುವ ಅನ್ನ ಎಲ್ಲದಲ್ಲೂ ದೇವರನ್ನು ಕಾಣುವ ಸಂಸ್ಕೃತಿ ನಮ್ಮದು. ಆದ್ದರಿಂದ ಮಕ್ಕಳು ತಮ್ಮ ತಂದೆ-ತಾಯಿಯಲ್ಲಿ ದೇವರನ್ನು ಕಾಣಬೇಕು. ಮಕ್ಕಳ ಸಂತೋಷದಲ್ಲೇ ಅಪ್ಪ-ಅಮ್ಮನ ಸಂತೋಷ ಅಡಗಿದೆ. ಅವರು ತಲೆತಗ್ಗಿಸುವ ಕಾರ್ಯಗಳನ್ನು ಮಾಡಬಾರದು. ಕೆಟ್ಟ ಪ್ರಭಾವಗಳಿಗೆ ಒಳಗಾಗಿ ಜೀವನವನ್ನು ಹಾಳುಮಾಡಿಕೊಳ್ಳಬಾರದು.ಕ್ಷಣಿಕ ಸುಖಕ್ಕಾಗಿ ಶಾಶ್ವತ ಸುಖವನ್ನು ಕಳೆದುಕೊಳ್ಳಬಾರದು. ವಿದ್ಯೆ ನೀಡಿದ ಗುರುಗಳು ಮತ್ತು ಆಶ್ರಯ ನೀಡಿದ ಸಂಸ್ಥೆಯನ್ನು ಎಂದಿಗೂ ಮರೆಯಬಾರದು ಎಂದು ಕಿವಿಮಾತು ನುಡಿದರು.
ವಿದ್ಯಾರ್ಥಿಗಳು ಹಾಗೂ ಪೋಷಕರು ಸಂಸ್ಥೆಯಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಈ ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಿಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ ಹಾಗೂ ಶಾಲಾ ಪ್ರಾಂಶುಪಾಲರಾದ ಶರಣ ಕುಮಾರ, ಶಾಲಾ ಆಡಳಿತಾಧಿಕಾರಿ ವೀಣಾ ರಶ್ಮಿ ಎಮ್., ಶಾಲಾ ಉಪಪ್ರಾಂಶುಪಾಲ ರಾಮ ದೇವಾಡಿಗ ಹಾಗೂ ಎಲ್ಲಾ ಶಿಕ್ಷಕ- ಶಿಕ್ಷಕೇತರ ವೃಂದದವರೂ ಉಪಸ್ಥಿತರಿದ್ದರು.
















