ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಕ್ತದಾನದ ಮೂಲಕ ಜೀವ ಉಳಿಸುವ ಪುಣ್ಯ ಕಾರ್ಯವನ್ನು ಮಾಡುತ್ತಿರುವ ಅಭಯಹಸ್ತ ಸಂಸ್ಥೆಗೆ ಯಾವುದೇ ರೋಗಿಯ ಆಶೀರ್ವಾದಕ್ಕಿಂತ ದೊಡ್ಡ ಸನ್ಮಾನ ಬೇರೊಂದಿಲ್ಲ ಎಂದು ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಅಭಿಪ್ರಾಯಪಟ್ಟರು.
ಅವರು ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ ಆಯೋಜಿಸುತ್ತಿರುವ 300ನೇ ರಕ್ತದಾನ ಶಿಬಿರದ ಲಾಂಛನ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಕೇವಲ 6 ವರ್ಷದಲ್ಲಿ ವಿವಿಧ ಸಂಘಟನೆಗಳ ಸಹಕಾರದಲ್ಲಿ 40,000 ಯೂನಿಟ್ ರಕ್ತ ಸಂಗ್ರಹಿಸಿರುವುದು ಅಭಯಹಸ್ತ ಸಂಸ್ಥೆಯ ಸಮಾಜದ ಸೇವೆಗೆ ಹಿಡಿದ ಕೈಗನ್ನಡಿ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸಮಾನ ಮನಸ್ಕರ ಸಹಕಾರದಲ್ಲಿ ಅಭಯಹಸ್ತವು ಇಂತಹ ಸಾಧನೆ ಮಾಡಿರುವುದು ಇತರ ಸಮಾಜಸೇವಾ ಸಂಸ್ಥೆಗಳಿಗೆ ಪ್ರೇರಣೆಯಾಗಿದೆ ಎಂದರು.

ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ ಇದರ ಸಾರಥ್ಯದಲ್ಲಿ ಹಮ್ಮಿಕೊಳ್ಳಲಾಗುತ್ತಿರುವ 300ನೇ ರಕ್ತದಾನ ಶಿಬಿರದ ಲಾಂಛನ ಬಿಡುಗಡೆ ಸಮಾರಂಭವಾದ ಹೆಗ್ಗುರುತು – 300 ( ಪೊಡವಿಗೊಡೆಯನ ಪದತಲದಲ್ಲಿ ಅಭಯಹಸ್ತ 300ನೇ ರಕ್ತದಾನ ಶಿಬಿರದ ಮೈಲುಗಲ್ಲು) ಎಂಬ ಯಶಸ್ವಿ ಸಮಾರಂಭವನ್ನು ಕುಂದಾಪುರದ ರೋಟರಿ ಭವನದಲ್ಲಿ ಆಯೋಜಿಸಲಾಗಿತ್ತು. ಕುಂದಾಪುರದ ಆದರ್ಶ ಆಸ್ಪತ್ರೆಯ ಡಾ. ಆದರ್ಶ್ ಹೆಬ್ಬಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಸಂದರ್ಭದಲ್ಲಿ ಕುಂದಾಪುರ ಸರಕಾರಿ ಆಸ್ಪತ್ರೆಯ ಹಿರಿಯ ತಜ್ಙ ವೈದ್ಯರಾದ ಡಾ. ನಾಗೇಶ್, ಜನಸೇವಾ ಟ್ರಸ್ಟ್ ರಿ. ಗಿಳಿಯಾರು ಇದರ ಅಧ್ಯಕ್ಷರಾದ ವಸಂತ ಗಿಳಿಯಾರ್, ಸಹನಾ ಗ್ರೂಫ್ ಆಫ್ ಹೋಟೆಲ್ಸ್ ಕುಂದಾಪುರ ಇದರ ಮಾಲೀಕರಾದ ಸುರೇಂದ್ರ ಶೆಟ್ಟಿ, ಮೊಬೈಲ್ ರಿಟೇಲರ್ಸ್ ಆಸೊಷಿಯೇಶನ್ ಉಡುಪಿ ಇದರ ಅಧ್ಯಕ್ಷರಾದ ವಿವೇಕ್ ಸುವರ್ಣ, ಜೆಸಿಐ ಕುಂದಾಪುರ ಇದರ ಅಧ್ಯಕ್ಷರಾದ ರಾಕೇಶ್ ಶೆಟ್ಟಿ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ ಇದರ ಉಪಾಧ್ಯಕ್ಷರಾದ ರಾಜೇಶ್ ಮೆಂಡನ್ ಬೈಪಾಸ್, ರಕ್ತದ ಆಪತ್ಭಾಂದವ ಸತೀಶ್ ಸಾಲ್ಯಾನ್ ಮಣಿಪಾಲ್ ಅಧ್ಯಕ್ಷರು, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ ಉಪಸ್ಥಿತರಿದ್ದರು.
ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ ಹಾಗೂ ಡಾ. ಬಳ್ಕೂರು ಗೋಪಾಲ ಆಚಾರ್ಯ ಕಾರ್ಯಕ್ರಮಕ್ಕೆ ಭೇಟಿ ನೀಡಿ ಶುಭಕೋರಿದರು.
ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದ ಪ್ರಶಾಂತ್ ತಲ್ಲೂರು, ಚರಣ್ ಗಂಗೊಳ್ಳಿ, ಚೇತನ್ ಖಾರ್ವಿ ಹಾಗೂ ದಿನೇಶ್ ಕಾಂಚನ್ ಬಾರಿಕೆರೆ ಯಶಸ್ವಿ ಕಾರ್ಯಕ್ರಮವನ್ನು ಸಂಘಟಿಸಿದರು. ಅಭಿಜಿತ್ ಕುಂದಾಪುರ ಸ್ವಾಗತಿಸಿ, ಚಂದ್ರಿಕಾ ಕಾರ್ಯಕ್ರಮ ನಿರೂಪಿಸಿ, ಸುಧಾಕರ್ ಕಾಂಚನ್ ಕುಂದಾಪುರ ಧನ್ಯವಾದ ಅರ್ಪಿಸಿದರು.
















