ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಠಿಣ ಪರಿಶ್ರಮ ಹಾಗೂ ಪ್ರಯತ್ನ ಬದುಕಿನಲ್ಲಿ ಯಶಸ್ಸು ನೀಡುತ್ತದೆ. ಕಲೆ ಸಂಸ್ಕೃತಿಯನ್ನು ಜೀವಂತವಾಗಿರಿಸಿಕೊಳ್ಳುವುದು ಬಹುಮುಖ್ಯ. ಸುರಭಿ ತನ್ನ ಚಟುವಟಿಕೆಗಳ ಮೂಲಕ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದು ಬೈಂದೂರಿಗೆ ಇನ್ನಷ್ಟು ಹಿರಿಮೆ ತಂದಿದೆ ಎಂದು ಉಪ್ಪುಂದ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ. ಗೋವಿಂದ ಬಾಬು ಪೂಜಾರಿ ಹೇಳಿದರು.
ಅವರು ಶನಿವಾರ ಸುರಭಿ ರಿ. ಬೈಂದೂರು ಇದರ ವಾರ್ಷಿಕ ಉತ್ಸವ ಸುರಭಿ ಜೈಸಿರಿ ಹಾಗೂ ಬಿಂದುಶ್ರೀ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರಭಿ ಅಧ್ಯಕ್ಷ ಆನಂದ ಮದ್ದೋಡಿ ವಹಿಸಿದ್ದರು. ಅತಿಥಿಗಳಾಗಿ ಮಂಗಳೂರು ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಸತೀಶ್ ಬಟವಾಡಿ, ಉದ್ಯಮಿಗಳಾದ ಶರತ್ ಕುಮಾರ್ ಶೆಟ್ಟಿ, ಬೈಂದೂರು ಶ್ರೀ ಸೇನೇಶ್ವರ ದೇವಳ ವ್ಯವಸ್ಥಾಪನಾ ಸಮಿತಿ ಸದಸ್ಯ ದೊಟ್ಟಯ್ಯ ಪೂಜಾರಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ವ್ಯವಸ್ಥಾಪನಾ ಸಮಿತಿ ಸದಸ್ಯೆ ಧನಾಕ್ಷಿ ವಿಶ್ವನಾಥ ಪೂಜಾರಿ, ಕಸಾಪ ಬೈಂದೂರು ಅಧ್ಯಕ್ಷ ಅರುಣ್ ಕುಮಾರ್, ರೋಟರಿ ಬೈಂದೂರು ನಿಕಟಪೂರ್ವ ಅಧ್ಯಕ್ಷ ಅರುಣ್ ಕುಮಾರ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಡಾ. ಶಿವರಾಮ ಕಾರಂತ ಬಾಲ ಪ್ರಶಸ್ತಿ ಪುರಸ್ಕೃತೆ ಕೃತಿಕಾ ಕೃಷ್ಣ ಗಾಣಿಗ ಅವರನ್ನು ಸಮ್ಮಾನಿಸಲಾಯಿತು ಹಾಗೂ ಪ್ರಶಾಂತ ಮಯ್ಯ ದಾರಿಮಕ್ಕಿ ಅವರನ್ನು ಗುರು ಕಾಣಿಕೆ ನೀಡಿ ಗೌರವಿಸಲಾಯಿತು.
ಸುರಭಿ ನಿರ್ದೇಶಕ ಸುಧಾಕರ ಪಿ. ಬೈಂದೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ದೇವಾಡಿಗ ಸ್ವಾಗತಿಸಿದರು. ಉಪಾಧ್ಯಕ್ಷ ಭಾಸ್ಕರ ಬಾಡ ಹಾಗೂ ಉದಯ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಶ್ರೀಧರ ಆಚಾರ್ಯ ವಂದಿಸಿದರು.
















