ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅನಾರೋಗ್ಯ ಹಿನ್ನೆಲೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ನೂಜಾಡಿ ಗ್ರಾಮದ ಕೊಡ್ಲಾಡಿ ಮನೆಯ ಭಾಸ್ಕರ ಪೂಜಾರಿ (60) ಅವರು ಬಗ್ವಾಡಿ ಸಮೀಪ ಚಕ್ರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅವರು ಮಧುಮೇಹ ತಪಾಸಣೆಗಾಗಿ ಆಸ್ಪತ್ರೆಗೆಂದು ಹೋಗಿದ್ದು, ಆ ಬಳಿಕ ನಾಪತ್ತೆಯಾಗಿದ್ದರು. ಮನೆಯವರು ಹಾಗೂ ಬಂಧುಗಳು ಹುಡುಕಾಡಿದಾಗ ಅವರ ಮೃತದೇಹವು ಮಾ.12 ರಂದು ಮಧ್ಯಾಹ್ನದ ಸುಮಾರಿಗೆ ಬಗ್ವಾಡಿಯ ಸೇತುವೆಯ ಕೆಳಗೆ ಚಕ್ರಾ ನದಿಯಲ್ಲಿ ಪತ್ತೆಯಾಗಿದೆ.
ಭಾಸ್ಕರ ಪೂಜಾರಿ ಅವರು ಪತ್ನಿ ಮಕ್ಕಳೊಂದಿಗೆ ಹುಬ್ಬಳಿಯಲ್ಲಿ ನೆಲೆಸಿದ್ದು, ಮನೆಯಲ್ಲಿಯೇ ಇರುತ್ತಿದ್ದರು. ಇತ್ತೀಚೆಗಷ್ಟೇ ಊರಿಗೆ ಬಂದಿದ್ದರು. ಇವರು ಬಿಪಿ, ಶುಗರ್ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಈ ಬಗ್ಗೆ ನೊಂದಿದ್ದರು. ಇದೇ ಕಾರಣದಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಅವರ ಸಹೋದರ ಗೋವಿಂದ ಪೂಜಾರಿ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










