ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಷ್ಟದ ಆ ಹಿಂದಿನ ದಿನಗಳಲ್ಲಿ ದೇವರ ಮೇಲಿನ ಪ್ರೀತಿ ಭಕ್ತಿಯಿಂದ ಬೆಣ್ಗೇರೆಯಲ್ಲಿ ಶ್ರೀ ನಾಗ ದೇವಸ್ಥಾನ ಸ್ಥಾಪಿಸಿ, ದೇವಸ್ಥಾನವನ್ನು ಇಷ್ಟು ಎತ್ತರಕ್ಕೆ ತಂದು ಸಂಪೂರ್ಣ ವ್ಯವಸ್ಥೆ ಇರುವ ದೇವಸ್ಥಾನವಾಗಿ ಮೂಡಿರುವುದು ಮೇಸ್ತ ಸಮಾಜದ ಹೆಮ್ಮೆ. ಮೇಸ್ತ ಸಮಾಜ ನಂಬಿಕೊಂಡು ಬಂದಿರುವ ನಾಗರಾಧನೆ, ನಾಗ ದೇವಸ್ಥಾನದ ಮೂಲಕ ಈ ಭಾಗದ ಎಲ್ಲರಿಗೂ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ. ಇಂತಹ ಧಾರ್ಮಿಕ ದೇವತಾ ಕಾರ್ಯಗಳು ನಿರಂತರವಾಗಿ ನಡೆದುಕೊಂಡು ಬರುವ ಹಾಗೆ ದೇವರು ಅನುಗ್ರಹಿಸಲಿ ಎಂದು ಬೆಣ್ಗೇರೆ ಶ್ರೀ ನಾಗ ದೇವಸ್ಥಾನದ ಅಧ್ಯಕ್ಷ ಉಮೇಶ ಎಲ್. ಮೇಸ್ತ ಹೇಳಿದರು.
ಅವರು ಬೆಣ್ಗೇರೆ ಶ್ರೀ ನಾಗ ದೇವಸ್ಥಾನದಲ್ಲಿ 51ನೇ ನಾಗ ಮಂಡಲೋತ್ಸವ ಹಾಗೂ ಅಷ್ಟಬಂಧ ಪ್ರತಿಷ್ಠಾಪನಾ ವರ್ಧಂತ್ಯುತ್ಸವ ಪ್ರಯುಕ್ತ ಶುಕ್ರವಾರ ಸಂಜೆ ಜರಗಿದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದೇವಸ್ಥಾನದ ಪ್ರಧಾನ ಪುರೋಹಿತರಾದ ರಾಘವೇಂದ್ರ ಅಡಿಗ, ಪಾಂಡೇಶ್ವರದ ಅಷ್ಟಾಂಗ ಯೋಗ ಗುರುಕುಲದ ಡಾ.ವಿಜಯ ಮಂಜರು, ಅಖಿಲ ಕರ್ನಾಟಕ ಚಾರೋಡಿ ಮೇಸ್ತ ಸಮಾಜದ ಉಪಾಧ್ಯಕ್ಷ ಸತೀಶ ಮೇಸ್ತ ಶಿರೂರು, ಬೆಣ್ಗೇರೆ ಖಾರ್ವಿ ಸಮಾಜ ಅಧ್ಯಕ್ಷ ಮಂಜುನಾಥ ಖಾರ್ವಿ, ಮತ್ಸ್ಯೋದ್ಯಮಿ ಮಡಿ ಸುರೇಶ ಖಾರ್ವಿ, ನಾಗಶ್ರೀ ಮಹಿಳಾ ಮಂಡಳಿ ಅಧ್ಯಕ್ಷೆ ಕುಸುಮ ಮೇಸ್ತ, ಶ್ರೀ ಸುಬ್ರಹ್ಮಣ್ಯೇಶ್ವರ ಯೂತ್ ಕ್ಲಬ್ ಅಧ್ಯಕ್ಷ ರಾಮದಾಸ ಕೆ.ಮೇಸ್ತ, ದೇವಸ್ಥಾನದ ಕಾರ್ಯದರ್ಶಿ ಶ್ರೀಧರ ಪಿ. ಮೇಸ್ತ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಪ್ರಕಾಶ ಮೇಸ್ತ ಸ್ವಾಗತಿಸಿದರು. ಶ್ರೀನಿವಾಸ ಮೇಸ್ತ ವಂದಿಸಿದರು. ಸುಂದರ ಜಿ. ಕಾರ್ಯಕ್ರಮ ನಿರ್ವಹಿಸಿದರು.










