ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜಾತಿ, ಭೌಗೋಳಿಕ, ವರ್ಣ, ಭಾಷೆ, ಲಿಂಗ ಮುಂತಾದ ಅಸಮಾನತೆಗಳು ಭಾರತದ ಸೌಹಾರ್ದತೆಯನ್ನು ಛಿದ್ರಗೊಳಿಸಿವೆ. ಇಂತಹ ಹಲವು ಅಸಮಾನತೆಗಳನ್ನು ಸೃಷ್ಠಿ ಮಾಡಿಕೊಂಡಿರುವ ನಮ್ಮ ಸಮಾಜದಲ್ಲಿ ಸೌಹಾರ್ದತೆಯ ಸ್ಥಾಪನೆ ಎನ್ನುವುದು ಒಂದು ಸವಾಲೇ ಸರಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ ಹೇಳಿದರು.
ಅವರು ಮಂಗಳವಾರ ತಾಲೂಕು ಸದ್ಭಾವನಾ ವೇದಿಕೆ ಹಾಗೂ ಕನ್ಯಾನದ ನಮ್ಮ ಭೂಮಿ ಸಂಸ್ಥೆಯ ಆಶ್ರಯದಲ್ಲಿ ಹಟ್ಟಿಯಂಗಡಿ ಸಮೀಪದ ಕನ್ಯಾನದ ನಮ್ಮ ಭೂಮಿ ಸಂಸ್ಥೆಯಲ್ಲಿ ʼಸಂವಿಧಾನದ ಆಶಯಗಳಿಗೆ ಸೌಹಾರ್ದವೇ ಮೆಟ್ಟಿಲುʼ ಎಂಬ ವಿಚಾರ ಸಂಕಿರಣ – ಸಂವಾದವನ್ನು ಉದ್ಘಾಟಿಸಿ ಮಾತನಾಡಿದರು. ಹಲವಾರು ವರ್ಷಗಳಿಂದ ಕಟ್ಟಿದ ಇದರ ಗೋಡೆಯನ್ನು ಒಮ್ಮೆಲೆ ಹೊಡೆದು ಹಾಕುವುದು ಅಷ್ಟೊಂದು ಸುಲಭವಲ್ಲ. ಆದರೆ ನಾವೆಲ್ಲ ಮನಸ್ಸು ಮಾಡಿದರೆ ಕ್ಷಣಾರ್ಧದಲ್ಲಿ ಕೆಡವಬಹುದು. ಸೌಹಾರ್ದತೆಯನ್ನು ಸಾಧಿಸುವ ಹೆಜ್ಜೆಯನ್ನು ಇಡಬಹುದು ಎಂದರು.

ಇದಕ್ಕೆ ಪೂರಕವಾಗಿ ನಮ್ಮೊಂದಿಗೆ ನಮ್ಮ ಸಂವಿಧಾನವಿದೆ. ಎಲ್ಲಾ ರೀತಿಯ ಅಸಮಾನತೆಗಳನ್ನು ತೊಡೆದು ಹಾಕುವ, ಸಮಾನತೆಯನ್ನು ಎತ್ತಿ ಹಿಡಿಯುವ ಎಲ್ಲವನ್ನೂ ಸಂವಿಧಾನ ಒಳಗೊಂಡಿದೆ. ಈ ಸಂವಿಧಾನ ನಮ್ಮದೇ ಕತೆ, ಅದನ್ನು ಓದಬೇಕಾದವರು ನಾವೇ, ಅನುಷ್ಠಾನ ಮಾಡಬೇಕಾದದವರೂ ನಾವೇ, ಕಿವಿಗೊಡಬೇಕಾದವರು ಹಾಗೂ ಅದನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಬೇಕಾದವರೂ ನಾವೇ. ಹಾಗಾಗಿ ನಮ್ಮ ಜವಾಬ್ದಾರಿಯನ್ನು ನಾವು ಪ್ರಾಮಾಣಿಕವಾಗಿ ನಿರ್ವಹಿಸೋಣ ಎಂದರು. ಸಮಾನತೆಯ, ಸೌಹಾರ್ದಯುತ ಸಮಾಜ ಸ್ಥಾಪನೆಯ ಜವಾಬ್ದಾರಿ ಎಲ್ಲರದ್ದೂ ಆಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಟಿ.ಬಿ. ಶೆಟ್ಟಿ ಅವರು ಸದ್ಭಾವನಾ ವೇದಿಕೆ ನಡೆದು ಬಂದ ದಾರಿ ಹಾಗೂ ಅದರ ಅಗತ್ಯತೆಯ ಬಗ್ಗೆ ಪ್ರಾಸ್ಥಾವಿಕ ನುಡಿಗಳನ್ನಾಡಿದರು. ಇಂದಿನ ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ ಸೌಹಾರ್ದತೆಯ ಮನೋಭಾವದ ಅಗತ್ಯತೆಯ ಬಗ್ಗೆ ಮತ್ತು ಅದನ್ನು ಬೆಳೆಸುವಲ್ಲಿ ಸಂವಿಧಾನದ ಆಶಯಗಳನ್ನು, ಅರ್ಥ ಮಾಡಿಕೊಳ್ಳುವ ಕೆಲಸಗಳಾಗಬೇಕು. ಸಂವಿಧಾನದ ಪೂರ್ವ ಪೀಠಿಕೆಯ ಕೆಲವು ಮುಖ್ಯ ಪದಗಳನ್ನು ಸರಿಯಾಗಿ ಅರ್ಥಮಾಡಿಕೊಂಡರೂ ಶಾಂತಿಯುತ ವಾತಾವರಣವನ್ನು ನಿರ್ಮಾಣ ಮಾಡಬಹುದು. ಇದರ ಜೊತೆಗೆ ಮಕ್ಕಳು ಹಾಗೂ ಯುವ ಸಮುದಾಯಗಳೊಂದಿಗೆ ಸಂವಿಧಾನದ ಆಶಯಗಳು, ಪೂರ್ವ ಪೀಠಿಕೆಯ ಅಂಶಗಳನ್ನು ನಿತ್ಯವೂ ತಿಳಿಸುವ, ಜಾಗೃತಿ ಮೂಡಿಸುವ ಕೆಲಸಗಳು ಆಗಬೇಕಾಗಿದೆ ಎಂದರು.
ವಿಶಿಷ್ಠವಾದ ಉದ್ಘಾಟನೆ:
ಸಂವಿಧಾನದ ಪೂರ್ವ ಪೀಠಿಕೆಯನ್ನು ಮುದ್ರಿಸುವ (ಸ್ಕ್ರೀನ್ ಪ್ರಿಂಟ್) ಮೂಲಕ ಕಾರ್ಯಕ್ರಮದ ಉದ್ಘಾಟನೆ ನಡೆಯಿತು. ನಂತರ ನಮ್ಮಭೂಮಿಯ ಮಕ್ಕಳು ರಂಗಕರ್ಮಿ ವಾಸುದೇವ ಗಂಗೇರರವರ ನಿರ್ದೇಶನದ ಸಂವಿಧಾನದ ಪೂರ್ವ ಪೀಠಿಕೆಯನ್ನು ಹಾಡುತ್ತ ನೃತ್ಯ ಮಾಡಿ ಪೂರ್ವಪೀಠಿಕೆಯ ಪ್ರತಿಯನ್ನು ಹಿಡಿದು ‘We the people of India ಮತ್ತು We the children of India’ ಘೋಷಣೆ ಕೂಗಿದರು. ಉದ್ಘಾಟಕರಿಗೆ ಅವರು ಮುದ್ರಿಸಿದ ಸಂವಿಧಾನದ ಪೂರ್ವಪೀಠಿಕೆಯ ಪ್ರತಿಯನ್ನೇ ಸ್ಮರಣಿಕೆಯಾಗಿ ನೀಡಿದ್ದು ವಿಶೇಷವೇ!
ಭಾಗವಹಿಸಿದವರು ಪುರುಷೋತ್ತಮ ಬಿಳಿಮಲೆಯವರೊಂದಿಗೆ ಸೌಹಾರ್ದಯುತ, ಶಾಂತಿಯ ವಾತಾವರಣ ನಿರ್ಮಾಣಕ್ಕೆ ಪೂರಕವಾದ ವಿಷಯಗಳು ಹಾಗೂ ಸಮಾಜದಲ್ಲಿ ಸಾಮರಸ್ಯವನ್ನು ಕೆಡಿಸುವ ವಿವಿಧ ವಿದ್ಯಮಾನಗಳ ಬಗ್ಗೆ ಸಂವಾದ ನಡೆಸಿದರು. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಸೌಹಾರ್ದತೆಯನ್ನು ಸಾಧಿಸುವ ಅಂಶಗಳ ಕುರಿತಾಗಿ ಸದ್ಭಾವನಾ ವೇದಿಕೆಯ ವಂಡ್ಸೆ ಉದಯ ಕುಮಾರ್ ಶೆಟ್ಟಿ ಅವರು ತಮ್ಮ ವಿಚಾರವನ್ನು ಮಂಡಿಸಿದರು. ವಿವಿಧ ಸಂದರ್ಭಗಳಲ್ಲಿ ಸಾಮರಸ್ಯವನ್ನು ಕೆಡಿಸುವ ಮೂಲಕ ಸಮಾಜದ ಸ್ವಾಸ್ಥವನ್ನು ಹಾಳುಗೆಡುವುವ ಪ್ರಯತ್ನಗಳ ಬಗ್ಗೆ ಸದ್ಭಾವನಾ ವೇದಿಕೆಯ ತಲ್ಲೂರಿನ ಜುಡಿತ್ ಮೆಂಡೊನ್ಸಾರವರು, ಸ್ಥಳೀಯವಾಗಿ ನಮ್ಮ ಸುತ್ತಮುತ್ತ ಜಾತಿ, ಧರ್ಮಗಳ ಬೇಧವಿಲ್ಲದೇ ಸಾಮರಸ್ಯದ ಬದುಕು ನಡೆಸುತ್ತಿರುವುದನ್ನು ಉದಾಹರಣೆಗಳ ಮೂಲಕ ಯಾಕೂಬ್ ಖಾದರ್ ಗುಲ್ವಾಡಿಯವರು ಹಂಚಿಕೊಂಡರು. ಈ ಸಂವಾದವನ್ನು ಉದಯ ಗಾಂವ್ಕರ್‌ರವರು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಸದ್ಭಾವನಾ ವೇದಿಕೆಯ ಪ್ರಶಾಂತ್ ತೋಳಾರ್, ವೇದವ್ಯಾಸ ಆಚಾರ್ಯ, ಗಣೇಶ್ ವಿ. ಕುಂಭಾಶಿ, ಗಣೇಶ್ ಬಾರ್ಕೂರು, ತಿಮ್ಮಪ್ಪ ಗುಲ್ವಾಡಿ, ಶಂಕರ್ ಕೆಂಚನೂರು, ರಫೀಕ್ ವಂಡ್ಸೆ, ಜಹೀರ್ ಅಹಮ್ಮದ್ ಗಂಗೊಳ್ಳಿ, ಚಂದ್ರಮತಿ ಶೆಟ್ಟಿ, ಅನಿಲ್ ಡಿಸೋಜಾ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ ಸಮಿತಿ ಸದಸ್ಯರಾದ ಗಣೇಶ್ ಮೆಂಡನ್, ವಾಸುದೇವ ಗಂಗೇರ, ಮುಸ್ತಾಜ್ ಹೆನ್ನಾಬೈಲು, ಜಮಾಲ್ ಗುಲ್ವಾಡಿ ಹಾಗೂ ನಮ್ಮಭೂಮಿಯ ಮಕ್ಕಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಸದ್ಭಾವನ ವೇದಿಕೆಯ ಸುಬ್ರಹ್ಮಣ್ಯ ಪಡುಕೋಣೆ ಅವರು ಕಾರ್ಯಕ್ರಮವನ್ನು ನಿರೂಪಿಸಿ, ಸಿಡಬ್ಲ್ಯೂಸಿ ಸಂಸ್ಥೆಯ ಶಿವಾನಂದ ಶೆಟ್ಟಿ ಸ್ವಾಗತಿಸಿ, ಕವಿತಾ ರತ್ನ ವಂದಿಸಿದರು.
















