ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕೋಡಿ ಕನ್ಯಾಣದಲ್ಲಿ ಇತ್ತೀಚೆಗೆ ಪಚ್ಚಿಲೆ ಕ್ಷೇತ್ರೋತ್ಸವ ಕೋಡಿ ಕನ್ಯಾಣದ ಸೇತುವೆ ಸಮೀಪ ಜರುಗಿತು. ಕ್ಷೇತ್ರೋತ್ಸವವನ್ನು ಉಡುಪಿ ಕಿನಾರ ಮೀನುಗಾರರ ಉತ್ಪಾದಕ ಕಂಪನಿ ನಿಯಮಿತ, ಅಮೃತೇಶ್ವರಿ ರೈತ ಉತ್ಪಾದಕ ಕಂಪನಿ ನಿಯಮಿತ, ಗೋವಾದ ಕರಾವಳಿ ಕೃಷಿ ಸಂಶೋಧನಾ ಸಂಸ್ಥೆ ಜಲಾನಯನ ಅಭಿವೃದ್ಧಿ ಇಲಾಖೆ, ಕೃಷಿ ಇಲಾಖೆ-ಉಡುಪಿ, ಮೀನುಗಾರಿಕೆ ಇಲಾಖೆ-ಉಡುಪಿ, ಭಾ.ಕೃ.ಅ.ಪ. ಕೃಷಿ ವಿಜ್ಞಾನ ಕೇಂದ್ರ-ಬ್ರಹ್ಮಾವರ, ಅರಬ್ಬಿ ಸಮುದ್ರ ಮೀನುಗಾರಿಕೆ ನಿರ್ವಹಣೆ ಸಮನ್ವಯ ಸಮಿತಿ, ಕೆನರಾ ಬ್ಯಾಂಕ್, ಯುಕೋ ಬ್ಯಾಂಕ್, ಸ್ಕೋಡ್‌ವೆಸ್ ಸಂಸ್ಥೆ ಮತ್ತು ಆಯುಷ್ಮಾನ್‌ಭವ ಸಂಸ್ಥೆಗಳು ಜಂಟಿಯಾಗಿ ಆಯೋಜಿಸಿತು.

ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಹಾಗೂ ಹಿರಿಯ ವಿಜ್ಞಾನಿ ಡಾ. ಧನಂಜಯ ಅವರು ಪಚ್ಚಿಲೆಯ ಚಿಪ್ಪನ್ನು ಬಿಡಿಸುವ ಮೂಲಕ ಈ ಕ್ಷೇತ್ರೋತ್ಸವಕ್ಕೆ ಅಧಿಕೃತ ಚಾಲನೆ ನೀಡಿದರು.
ಆದಾಯ ಹೆಚ್ಚಳಕ್ಕೆ ಹೊಸ ತಳಿಗಳ ಕೃಷಿ ಅಗತ್ಯ:
ಕಾರ್ಯಕ್ರಮದಲ್ಲಿ ಮಾತನಾಡಿದ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಧನಂಜಯ ಮೀನುಗಾರರು ಸಾಂಪ್ರದಾಯಿಕ ಪದ್ಧತಿಯ ಜೊತೆಗೆ ಹೊಸ ತಳಿಗಳ ಮೀನು ಕೃಷಿಯತ್ತ ಹೆಚ್ಚಿನ ಒಲವು ತೋರಬೇಕು. ಇಂತಹ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದ್ದು, ಗ್ರಾಹಕರು ಇವುಗಳನ್ನು ಹೆಚ್ಚು ಇಷ್ಟಪಡುತ್ತಾರೆ. ವೈಜ್ಞಾನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಕೃಷಿ ಮಾಡುವುದರಿಂದ ಮೀನುಗಾರರು ತಮ್ಮ ಆದಾಯವನ್ನು ಗಣನೀಯವಾಗಿ ಹೆಚ್ಚಿಸಿಕೊಳ್ಳಲು ಸಾಧ್ಯವಿದೆ” ಎಂದು ತಿಳಿಸಿದರು.
ಸಬ್ಸಿಡಿ ಸೌಲಭ್ಯದ ಸದ್ಬಳಕೆಗೆ ಸೂಚನೆ:
ಉಡುಪಿ ಜಿಲ್ಲಾ ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಕುಮಾರ್ ಸ್ವಾಮಿ ಅವರು ಮಾತನಾಡಿ, ಆಧುನಿಕ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಮೀನು ಹಾಗೂ ಇತರ ಜಲಚರಗಳ ಉತ್ಪಾದನೆಯನ್ನು ಹೆಚ್ಚಿಸಿ ಸುಸ್ಥಿರ ಆದಾಯ ಗಳಿಸಲು ಉತ್ತಮ ಅವಕಾಶಗಳಿವೆ ಎಂದು ತಿಳಿಸಿದರು. ಇದೇ ವೇಳೆ ಇಲಾಖೆಯ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳು ಅಗತ್ಯ ದಾಖಲೆಗಳನ್ನು ಶೀಘ್ರವಾಗಿ ಸಲ್ಲಿಸಿ, ಸರ್ಕಾರದಿಂದ ಸಿಗುವ ಸಬ್ಸಿಡಿ (ಸಹಾಯಧನ) ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ಅವರು ಮೀನುಗಾರರಿಗೆ ಸಲಹೆ ನೀಡಿದರು.
ಹಿರಿಯ ಕೃಷಿ ವಿಜ್ಞಾನಿ ಡಾ. ಶ್ರೀಕಾಂತ್ ಅವರು ಮಾತನಾಡಿ, ಪಚ್ಚಿಲೆ ಕೃಷಿಯು ಸಂಪೂರ್ಣವಾಗಿ ನೈಸರ್ಗಿಕವಾಗಿದ್ದು, ಇದರಿಂದ ಪರಿಸರದ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದರು ಅಲ್ಲದೆ, ಈ ವರ್ಷ ಪಚ್ಚಿಲೆ ಉತ್ಪಾದನೆ ಹೆಚ್ಚಿರುವುದರಿಂದ ಮಾರುಕಟ್ಟೆಯಲ್ಲಿ ಎದುರಾಗಿರುವ ಕೆಲವು ಸವಾಲುಗಳನ್ನು ನಿವಾರಿಸಲು ಸಂಶೋಧನಾ ಸಂಸ್ಥೆಯು ಪ್ರಯತ್ನಿಸುತ್ತಿದೆ ಎಂದು ಅವರು ಭರವಸೆ ನೀಡಿದರು.
ಆರ್ಥಿಕ ನೆರವು ಮತ್ತು ಪ್ರಗತಿಪರ ರೈತರ ಭಾಗಿತ್ವದಡಿ ಬ್ಯಾಂಕಿಂಗ್ ವಲಯದಿಂದ ಸಿಗುವ ಸಾಲ ಸೌಲಭ್ಯಗಳ ಕುರಿತು ಕೆನರಾ ಬ್ಯಾಂಕ್‌ನ ಮೀರಾ ಹಾಗೂ ಕೋಟ ಯುಕೋ ಬ್ಯಾಂಕ್‌ನ ನರೇಶ್ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ವಿಜ್ಞಾನಿ ಡಾ.ಎಲ್ರೋಯ್ ಫೇರೆರಾ ,ಪ್ರಗತಿಪರ ಕೃಷಿಕರಾದ ಗಣಪ ಪೂಜಾರಿ, ಸುಶ್ಮಿತಾ, ರವಿ ಖಾರ್ವಿ ಮತ್ತು ಕೃಷಿಸಖಿ ತನುಜಾ, ಉಡುಪಿಕಿನಾರ ಮೀನುಗಾರರ ಉತ್ಪಾದಕ ಕಂಪನಿ ನಿರ್ದೇಶಕ ಸುದಿನ ಕೋಡಿ ಅವರು ಉಪಸ್ಥಿತರಿದ್ದು, ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ವಿಶೇಷ ಆಕರ್ಷಣೆ:
ಕಾರ್ಯಕ್ರಮದಲ್ಲಿ ವೈಜ್ಞಾನಿಕವಾಗಿ ಪಚ್ಚಿಲೆ ಕಟಾವು ಮಾಡುವುದು ಹೇಗೆ ಎಂಬುದನ್ನು ತೋರಿಸಿಕೊಡಲಾಯಿತು. ಇದೇ ಸಂದರ್ಭದಲ್ಲಿ ಪಚ್ಚಿಲೆಯನ್ನು ಬಳಸಿ ತಯಾರಿಸಿದ ವಿವಿಧ ನೂತನ ಹಾಗೂ ರುಚಿಕರವಾದ ತಿಂಡಿ ತಿನಿಸುಗಳನ್ನು ಪ್ರದರ್ಶಿಸಲಾಯಿತು. ಕರಾವಳಿಯ ನೂರಾರು ಕೃಷಿಕರು ಹಾಗೂ ಆಸಕ್ತರು ಈ ತರಬೇತಿ ಮತ್ತು ಪ್ರಾತ್ಯಕ್ಷಿಕೆಯ ಪ್ರಯೋಜನ ಪಡೆದುಕೊಂಡರು.
ಪಚ್ಚಿಲೆ ಕಟಾವು ಸ್ಥಳದಲ್ಲೇ ಪಚ್ಚಿಲೆ ಕಟಾವು ಮಾಡುವ ಪ್ರಕ್ರಿಯೆಯನ್ನು ಪ್ರದರ್ಶನ,ಪಚ್ಚಿಲೆ ಕೃಷಿಯನ್ನು ಹೇಗೆ ಮಾಡಬೇಕು ಮತ್ತು ಅದರಲ್ಲಿರುವ ಲಾಭಗಳೇನು ಎಂಬ ಬಗ್ಗೆ ಸವಿಸ್ತಾರವಾದ ಮಾಹಿತಿ ಕಾರ್ಯಾಗಾರ ನೀಡಲಾಯಿತು.ಪಚ್ಚಿಲೆ ಕೃಷಿಕರ ಸಂವಾದ ಕೃಷಿ ಮತ್ತು ಮೀನುಗಾರಿಕೆ ಕ್ಷೇತ್ರಕ್ಕೆ ಸಂಬಂಧಿಸಿದ ಸಂಶೋಧನಾ ವಿಜ್ಞಾನಿಗಳು ಹಾಗೂ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ನೇರ ಸಂವಾದ ನಡೆಸಲು ಕೃಷಿಕರಿಗೆ ಉತ್ತಮ ಅವಕಾಶ ಕಲ್ಪಿಸಿಕೊಡಲಾಯಿತು.
ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಮೀನುಗಾರಿಕೆ ವಿಜ್ಞಾನಿ ಡಾ. ಸದಾನಂದ ಆಚಾರ್ಯ ಅವರು ಕಾರ್ಯಕ್ರಮಕ್ಕೆ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿ, ವಂದನಾರ್ಪಣೆ ಗೈದರು.

















