ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಸಾಮಾಜಿಕ ಜಾಲತಾಣದ ಮೂಲಕ ವಿವಾಹಿತೆಯ ಗೆಳೆತನ ಬೆಳೆಸಿ, ಅಧಿಕ ಲಾಭ ನೀಡುವ ಆಮಿಷವೊಡ್ಡಿ 84.5 ಲಕ್ಷ ರೂ. ಪಡೆದು ವಂಚಿಸಿದ್ದಲ್ಲದೆ ಅತ್ಯಾಚಾರಗೈದು ಬ್ಲ್ಯಾಕ್‌ಮೇಲ್ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬ್ರಹ್ಮಾವರ ತಾಲೂಕಿನ ಕೂರಾಡಿ ನಿವಾಸಿ ಸಂತೋಷ ಪೂಜಾರಿ (39) ಬಂಧಿತ ಆರೋಪಿ.
ಕೋಟ ನಿವಾಸಿ ವಿವಾಹಿತೆಯನ್ನು ಪರಿಚಯ ಮಾಡಿಕೊಂಡು ನಕಲಿ ಖಾತೆಯಲ್ಲಿ ಮಾತುಕತೆ ಮುಂದುವರಿಸಿದ್ದ. ಷೇರು ಮಾರ್ಕೆಟ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಲಾಭ ಬರುವುದಾಗಿ ನಂಬಿಸಿದ್ದ. ಮಹಿಳೆಯು 2024ರ ಸೆಪ್ಟೆಂಬರ್‌ನಲ್ಲಿ 2 ಸಾವಿರ ರೂ. ಗೂಗಲ್‌ಪೇ ಮಾಡಿದ್ದು, ಆಕೆಯ ನಂಬಿಕೆ ಗಳಿಸಲು ಸಂತೋಷ್ 1,91,700 ರೂ. ಕೊಟ್ಟಿದ್ದ. ಅದನ್ನು ನಂಬಿದ ಮಹಿಳೆ ಸಾಲ ಮಾಡಿ ಹಂತ ಹಂತವಾಗಿ 84, 53,500 ರೂ. ವರ್ಗಾಯಿಸಿದ್ದರು.
ಹಣ ವಾಪಸ್ ಕೇಳಿದಾಗ ಆರೋಪಿ ಮರಳಿಸುವುದಾಗಿ ಹೇಳಿ ಹೊಟೇಲ್ ಕೊಠಡಿಗೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ. ವಿಡಿಯೋ ಮಾಡಿಕೊಂಡಿರುವುದಾಗಿ ಬ್ಲ್ಯಾಕ್ ಮೇಲ್ ಮಾಡಿ ಮತ್ತೆ ನಾಲೈದು ಬಾರಿ ಅತ್ಯಾಚಾರ ಎಸಗಿದ್ದಾನೆ. ಘಟನೆ ಬಗ್ಗೆ ಯಾರಿಗಾದರೂ ಹೇಳಿದರೆ ಮಹಿಳೆಯ ತಾಯಿ ಮತ್ತು ಪುತ್ರಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿರುವುದಾಗಿ ಉಡುಪಿ ಎಸ್‌ಪಿಗೆ ಸಂತ್ರಸ್ತೆ ದೂರು ನೀಡಿದ್ದು, ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

















