ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ನಮ್ಮ ಉಸಿರಾಟದ ಕ್ರಮ ಹಾಗೂ ಉತ್ತಮ ಆಹಾರ ಸಂಸ್ಕೃತಿಯ ಕೊರತೆಯಿಂದಾಗಿ ಇಂದಿನ 21 ವರ್ಷದ ಯುವಕರು 80 ವರ್ಷದ ವೃದ್ಧರಂತೆ ಕಾಣುವಂತಾಗಿದೆ. ನಮ್ಮ ಮೂಗು ಮತ್ತು ಬಾಯಿ ಎರಡೂ ಸರಿಯಾಗಿದ್ದರೆ ಆರೋಗ್ಯವು ಸುಸ್ಥಿತಿಯಲ್ಲಿರುತ್ತದೆ ಎಂದು ಯೋಗ ಗುರು ಚೇಂಪಿ ಪ್ರಕಾಶ್ ಭಟ್ ತಿಳಿಸಿದರು.
ಅವರು ಕೋಟದ ವಿವೇಕ ಬಾಲಕಿಯರ ಪ್ರೌಢಶಾಲೆಯ ಕ್ರೀಡಾ ಸಂಘ ಮತ್ತು ಆರೋಗ್ಯ ಸಂಘದ ಜಂಟಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ’ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಡೆದ ಯೋಗ ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ನಡೆಸಿಕೊಟ್ಟು ಮಾತನಾಡಿದರು. ಸೂರ್ಯ ನಮಸ್ಕಾರ ಇದು ಸರ್ವ ದೈಹಿಕ ರೋಗಗಳಿಗೂ ರಾಮಬಾಣವಿದ್ದಂತೆ. ಪ್ರತಿದಿನ 21 ಬಾರಿ ಭ್ರಾಮರೀ ಪ್ರಾಣಾಯಾಮ ಮಾಡುವುದರಿಂದ ನೆನಪಿನ ಶಕ್ತಿ ಅಪಾರವಾಗಿ ಹೆಚ್ಚುತ್ತದೆ ಎಂದರು.
ನಾವು ತಟ್ಟುವ ಚಪ್ಪಾಳೆಯು ನಮ್ಮ ಮನಸ್ಸಿನ ಏಕಾಗ್ರತೆಯನ್ನು ವೃದ್ಧಿಸಲು ಸಹಕಾರಿಯಾಗಿದೆ. ಇದೇ ವೇಳೆ, ಪ್ರತಿಯೊಬ್ಬ ವಿದ್ಯಾರ್ಥಿಯೂ ದಿನಕ್ಕೆ ಕನಿಷ್ಠ ಅರ್ಧ ಗಂಟೆಯಾದರೂ ಯೋಗಾಭ್ಯಾಸ ಮಾಡಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ವೆಂಕಟೇಶ ಉಡುಪ, ಆರೋಗ್ಯ ಸಂಘದ ಸಂಚಾಲಕಿ ಮಮತಾ ಹಾಗೂ ಕ್ರೀಡಾ ಸಂಘದ ಕಾರ್ಯದರ್ಶಿ ಕುಮಾರಿ ಸಮೀಕ್ಷಾ ಉಪಸ್ಥಿತರಿದ್ದರು. ಆರೋಗ್ಯ ಸಂಘದ ಕಾರ್ಯದರ್ಶಿ ಕುಮಾರಿ ಸಾನ್ವಿ ಅವರು ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.

















