ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇನ್‌ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICMAI) ನಡೆಸಿದ ಸಿಎಂಎ ಇಂಟರ್‌ಮೀಡಿಯಟ್ ಜೂನ್–2026ರ ಪರೀಕ್ಷೆಯಲ್ಲಿ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಪ್ರಾಕ್ತನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ದಾಖಲಿಸಿ ಕಾಲೇಜಿನ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಮತ್ತೊಮ್ಮೆ ಎತ್ತಿ ಹಿಡಿದಿದ್ದಾರೆ.
2024-25 ಸಾಲಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಬಿ.ಕಾಂ. ಪದವಿಯಲ್ಲಿ ಎರಡನೇ ರ‍್ಯಾಂಕ್ ಪಡೆದು ಕಾಲೇಜಿಗೆ ಕೀರ್ತಿ ತಂದುಕೊಟ್ಟ ಮುದೂರಿನ ಶೀನ ಪೂಜಾರಿ ಅವರ ಪುತ್ರಿ ಶ್ರೇಯಾ ಅವರು ಸಿಎಂಎ ಇಂಟರ್ಮಿಡಿಯೇಟ್ ಗ್ರೂಪ್–1 ಹಾಗೂ ಗ್ರೂಪ್ -2 ಎರಡೂ ಪರೀಕ್ಷೆಗಳಲ್ಲಿ ಮೊದಲ ಪ್ರಯತ್ನದಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಲ್ಲದೆ ಅಖಿಲ ಭಾರತ ಮಟ್ಟದಲ್ಲಿ 28ನೇ ಸ್ಥಾನ ಗಳಿಸುವ ಮೂಲಕ ಕಾಲೇಜಿಗೆ ರಾಷ್ಟçಮಟ್ಟದ ಹೆಮ್ಮೆ ತಂದುಕೊಟ್ಟಿದ್ದಾರೆ.
ಪ್ರಾಕ್ತನ ವಿದ್ಯಾರ್ಥಿಗಳಾದ ಸಾಗರದ ಪಾಂಡುರಂಗ ಪೈಯವರ ಪುತ್ರಿ ಪವಿತ್ರ ಪೈ ಹಾಗೂ ಸಾಗರದ ದಿ. ಮಂಜುನಾಥ ಕೆ.ವಿ. ಅವರ ಪುತ್ರ ಮದನ್ ಎಂ.ವಿ., ಈರ್ವರು ಸಿಎಂಎ ಇಂಟರ್ಮೀಡಿಯಟ್ ಗ್ರೂಪ್ – 1 ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.
ಪ್ರಾಕ್ತನ ವಿದ್ಯಾರ್ಥಿಗಳ ಈ ಗಮನಾರ್ಹ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಪ್ರಾಧ್ಯಾಪಕರು ಹಾಗೂ ಬೋಧಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ. ವಿದ್ಯಾರ್ಥಿಗಳ ನಿರಂತರ ಪರಿಶ್ರಮ, ಪೋಷಕರ ಪ್ರೋತ್ಸಾಹ ಹಾಗೂ ಕಾಲೇಜಿನ ಗುಣಮಟ್ಟದ ಶೈಕ್ಷಣಿಕ ಮಾರ್ಗದರ್ಶನವೇ ಈ ಸಾಧನೆಗೆ ಪ್ರಮುಖ ಕಾರಣವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
















