ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಭಾಗವಾಗಿ ಜಿಲ್ಲೆಯ ಎಲ್ಲಾ ಮತಗಟ್ಟೆ ಅಧಿಕಾರಿಗಳು ಮತದಾರರ ಮನೆ ಮನೆಗಳಿಗೆ ಭೇಟಿ ನೀಡಿ, ಎನುಮರೇಷನ್ ಫಾರ್ಮ್ ಅನ್ನು ವಿತರಿಸಿ, ಮತದಾರರ ವಿವರವನ್ನು ಇಂದಿನಿಂದ (ಜೂನ್ 30) ಕಲೆ ಹಾಕುತ್ತಿದ್ದು, ಈ ಬಗ್ಗೆ ನಗರದ ಇಂದ್ರಾಳಿ, ಕುಂಜಿಬೆಟ್ಟು, ಕಾಡಬೆಟ್ಟು, ಪಣಿಯಾಡಿ ಸೇರಿದಂತೆ ಮತ್ತಿತರ ವಾರ್ಡ್ಗಳಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಭೇಟಿ ನೀಡಿ ಪರಿಶೀಲಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯು ಎಲ್ಲಾ ಅರ್ಹ ನಾಗರಿಕರನ್ನು ಮತದಾರ ಪಟ್ಟಿಯಲ್ಲಿ ಸೇರ್ಪಡೆಗೊಳೀಸುವುದೇ ಮುಖ್ಯ ಉದ್ದೇಶವಾಗಿದೆ. ಈ ವಿಶೇಷ ಸಮಗ್ರ ಪರಿಷ್ಕರಣೆ ಅವಧಿಯಲ್ಲಿ ಪ್ರತಿಯೊಬ್ಬ ಅರ್ಹ ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದನ್ನು ಪರಿಶೀಲಿಸಿ, ಖಚಿತಪಡಿಸಿಕೊಳ್ಳಬೇಕು ಎಂದರು.
ಈಗಾಗಲೇ ಪೂರ್ವಸಿದ್ಧತಾ ಕಾರ್ಯಗಳ ಪ್ರಕ್ರಿಯೆಗಳು ನಡೆದಿವೆ. ಇಂದಿನಿಂದ (ಜೂನ್ 30) ಜುಲೈ 29 ರ ವರೆಗೆ ಬಿಎಲ್‌ಒ ಗಳು ಮನೆ ಮನೆ ಸಮೀಕ್ಷೆ ಭೇಟಿ ನೀಡಿ, ಎನುಮರೇಷನ್ ಫಾರಂಗಳನ್ನು ನೀಡಿ, ಸಾರ್ವಜನಿಕರಿಂದ ಭರ್ತಿ ಮಾಡಲಾದ ಗಣತಿ ನಮೂನೆಗಳನ್ನು ಭಾವಚಿತ್ರ ಸೇರಿದಂತೆ ಅಗತ್ಯ ದಾಖಲಾತಿಗಳನ್ನು ಪಡೆಯಲಿದ್ದಾರೆ. ಸಾರ್ವಜನಿಕರು ಈ ಪ್ರಕ್ರಿಯೆಗೆ ಸಹಕರಿಸಬೇಕು ಎಂದ ಅವರು, ಭರ್ತಿ ಮಾಡಿದ ಫಾರಂಗಳ ಮೇಲೆ ಮತದಾರರ ಸಹಿ ಅಥವಾ ಹೆಬ್ಬೆರಳ ಗುರುತು ಕಡ್ಡಾಯವಾಗಿ ಇರಬೇಕೆಂದರು.
ಆಗಸ್ಟ್ 5 ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಇದರ ಬಗ್ಗೆ ಹಕ್ಕು ಮತ್ತು ಆಕ್ಷೇಪಣೆಗಳು ಇದ್ದಲ್ಲಿ ಆಗಸ್ಟ್ 5 ರಿಂದ ಸೆಪ್ಟೆಂಬರ್ 4 ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇವುಗಳ ವಿಲೇವಾರಿಯನ್ನು ಆಗಸ್ಟ್ 5 ರಿಂದ ಅಕ್ಟೋಬರ್ 3 ರ ವರೆಗೆ ನಡೆಸಿ, ಅಕ್ಟೋಬರ್ 7 ಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದರು.
ಸಗ್ರಿ ವಾರ್ಡ್ನ ಬಿ.ಎಲ್.ಓ ಪ್ರಮೋದಾ ಮಾತನಾಡಿ, ಮತಗಟ್ಟೆ ಅಧಿಕಾರಿಗಳು ಪ್ರತಿ ಮನೆಗೂ ಭೇಟಿ ನೀಡಿ, ಆ ಮನೆಯ ಮತದಾರರಿಗೆ ಗಣತಿ ನಮೂನೆಯ ಎರಡೂ ಪ್ರತಿಗಳನ್ನು ನೀಡುತ್ತಿದ್ದೇವೆ. ಮತದಾರರು ಎರಡನ್ನೂ ಭರ್ತಿ ಮಾಡಿ, ನಂತರ ಭಾವಚಿತ್ರ ಅಂಟಿಸಿ, ಸಹಿ ಮಾಡಬೇಕು. ಒಂದು ಪ್ರತಿಯನ್ನು ನಮಗೆ ನೀಡಿ, ಮತ್ತೊಂದು ಪ್ರತಿಯನ್ನು ನಮ್ಮ ಸಹಿ ಪಡೆದು ಸಂಗ್ರಹಿಸಿಟ್ಟುಕೊಳ್ಳಬೇಕು. ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ನೋಂದಾಯಿಸಿಕೊಳ್ಳುವವರೆಗೂ ಇದೇ ನಿಯಮ ಅನ್ವಯವಾಗಲಿದೆ ಎಂದರು.
ನಾವುಗಳು ಮನೆಗಳಿಗೆ ಭೇಟಿ ನೀಡಿದಾಗ ಮನೆಯಲ್ಲಿ ಜನರು ಇದ್ದು, ಗಣತಿ ನಮೂನೆಗಳನ್ನು ಸ್ವೀಕರಿಸಿದರೆ ಅಂತಹ ಮನೆಗಳಿಗೆ ನೇರಳೆ ಬಣ್ಣದ ಚೌಕಾಕಾರದ ಸ್ಟಿಕ್ಕರ್ ಹಾಗೂ ಮನೆಗೆ ಬೀಗ ಹಾಕಿದ್ದರೆ ಕೆಂಪು ಬಣ್ಣದ ವೃತ್ತಾಕಾರದ ಸ್ಟಿಕ್ಕರ್ ಅಂಟಿಸಲಾಗುವುದು ಎಂದರು.
ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಮಹಮ್ಮದ್ ಮೌಲ ಮಾತನಾಡಿ, ಜಿಲ್ಲಾ ಚುನಾವಣಾ ಕಚೇರಿಯ ಬಿ.ಎಲ್.ಓ ಗಳು ಇಂದು ಮನೆ ಮನೆಗ ಭೇಟಿ ನೀಡಿ, ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಅಂಗವಾಗಿ ಎನುಮರೇಷನ್ ಫಾಮ್ ಅನ್ನು ನೀಡಿದ್ದಾರೆ. ಇವುಗಳನ್ನು ಪೂರ್ಣ ಪ್ರಮಾಣದಲ್ಲಿ ತುಂಬಿ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಲಾಗುವುದರ ಜೊತೆಗೆ ಮತದಾರರ ಪಟ್ಟಿಯಲ್ಲಿ ನನ್ನ ಹಾಗೂ ನನ್ನ ಕುಟುಂಬದ ಹೆಸರುಗಳು ನೋಂದಣಿಯಾಗಿದೆಯೇ ಎಂದು ಪರಿಶೀಲಿಸಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಉಡುಪಿ ತಾಲೂಕು ತಹಶೀಲ್ದಾರ್ ಗುರುರಾಜ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

















