ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯಾದ್ಯಂತ ಮಾದಕ ವಸ್ತುಗಳ ಸಾಗಾಣಿಕೆ, ಬಳಕೆ ಮತ್ತು ಮಾರಾಟದ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಲು ಕ್ಯೂ.ಆರ್ ಕೋಡ್ ಅನ್ನು ಅಭಿವೃದ್ಧಿಗೊಳಿಸಲಾಗಿದೆ. ಸಾರ್ವಜನಿಕರು ಈ ಬಗ್ಗೆ ಮಾಹಿತಿ ಇದ್ದಲ್ಲಿ ಕೂಡಲೇ ಕ್ಯೂ ಆರ್ ಕೋಡ್ ಬಳಕೆ ಮೂಲಕ ಮಾಹಿತಿ ಹಂಚಿಕೊಳ್ಳಬೇಕೆಂದು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅಧಿಕಾರಿಗಳಿಗೆ ಕರೆ ನೀಡಿದರು.
ಅವರು ಮಂಗಳವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಎನ್.ಸಿ.ಓ.ಆರ್.ಡಿ (Narco Co-ordination Center) ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾದಕ ವಸ್ತುಗಳ ನಿಯಂತ್ರಣಕ್ಕೆ ಅನುಕೂಲವಾಗಲು ಪೋಲೀಸ್ ಇಲಾಖೆಯು ಕ್ಯೂ ಆರ್ ಕೋಡ್ ಅನ್ನು ಅಭಿವೃದ್ಧಿಗೊಳಿಸಿದೆ. ಸಾರ್ವಜನಿಕರು ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸಾಗಾಣಿಕೆ, ಬಳಕೆ ಹಾಗೂ ಮಾರಾಟ ಕಂಡುಬಂದಲ್ಲಿ ಕ್ಯೂ ಆರ್ ಕೋಡ್ ಬಳಕೆಯ ಮೂಲಕ ಮಾಹಿತಿಯನ್ನು ಪೊಲೀಸ್ ಇಲಾಖೆಯ ಜೊತೆಗೆ ಹಂಚಿಕೊಳ್ಳಬಹುದಾಗಿದೆ. ಮಾಹಿತಿ ನೀಡಿದವರ ವಿವರವನ್ನು ರಹಸ್ಯವಾಗಿ ಇಡಲಾಗುವುದು. ಜಿಲ್ಲೆಯನ್ನು ಮಾದಕ ವಸ್ತು ಮುಕ್ತವನ್ನಾಗಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.

ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು, ಕೈಗಾರಿಕಾ ಕೇಂದ್ರ, ಕಾರ್ಮಿಕ ಇಲಾಖೆಯವರು, ಕ್ಯೂ ಆರ್ ಕೋಡ್ ಅನ್ನು ಸಾರ್ವಜನಿಕವಾಗಿ ಎದ್ದುಕಾಣುವ ಹಾಗೆ, ಬಸ್ ನಿಲ್ದಾಣ, ಕೈಗಾರಿಕಾ ಹಾಗೂ ಕಾರ್ಮಿಕ ಅಸೋಸಿಯೇಷನ್ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಹಾಗೂ ಸಿನಿಮಾ ಹಾಲ್‌ಗಳಲ್ಲಿ ಪ್ರಚಾರ ಪಡಿಸಬೇಕು.
ಮಾದಕ ವಸ್ತುಗಳ ಸೇವನೆಯಿಂದ ಮನುಷ್ಯನ ಆರೋಗ್ಯದ ಮೇಲೆ ಗಂಭೀರ ಮಾರಕ ಕಾಯಿಲೆಗಳು ಉಂಟಾಗುವುದರ ಜೊತೆಗೆ ಮಾನಸಿಕ ನೆಮ್ಮದಿ ಹಾಳಾಗುವುದು ಹಾಗೂ ಆರ್ಥಿಕವಾಗಿ ನಷ್ಟ ಉಂಟಾಗುತ್ತದೆ. ಹೆಚ್ಚಾಗಿ ಯುವ ಸಮುದಾಯದವರು ಇಂತಹ ಪೀಡೆಗಳಿಗೆ ಆಕರ್ಷಿತವಾಗುತ್ತಾರೆ. ಶಾಲಾ- ಕಾಲೇಜುಗಳಲ್ಲಿ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿನಾಮದ ಬಗ್ಗೆ ಹೆಚ್ಚು ಹೆಚ್ಚು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಯುವ ಜನರಲ್ಲಿ ಜಾಗೃತಿ ಮೂಡಿಸಬೇಕೆಂದರು.
ಕೃಷಿ, ತೋಟಗಾರಿಕೆ, ಅರಣ್ಯ ಇಲಾಖೆಯ ಸಿಬ್ಬಂದಿಗಳು ಕೃಷಿ ಜಮೀನುಗಳು, ತೋಟಗಳು ಹಾಗೂ ಕಾಡಂಚಿನಲ್ಲಿ ಆಗಿಂದಾಗ್ಗೆ ಅನಿರೀಕ್ಷಿತ ಭೇಟಿಗಳನ್ನು ಮಾಡಿ, ಗಾಂಜಾ ಬೆಳೆಗಳನ್ನು ಬೆಳೆಯುತ್ತಿರುವ ಬಗ್ಗೆ ಪರಿಶೀಲನೆ ನಡೆಸಬೇಕೆಂದರು.
ಔಷಧಿ ಅಂಗಡಿಗಳಲ್ಲಿ ಅಮಲು ಬರಿಸುವಂತಹ ಔಷಧಿಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುವ ಹಾಗಿಲ್ಲ. ವೈದ್ಯರ ನಿರ್ದೇಶನದ ಚೀಟಿಗಳಿದ್ದಲ್ಲಿ ಮಾತ್ರ ಅಂತಹ ಔಷಧಿಗಳನ್ನು ಮಾರಾಟ ಮಾಡಬಹುದು. ಜೊತೆಗೆ ಈ ಬಗ್ಗೆ ಸೂಚನಾ ಫಲಕವನ್ನು ಸಹ ಕಡ್ಡಾಯವಾಗಿ ಅಳವಡಿಸಬೇಕು. ಜಿಲ್ಲಾ ಔಷಧ ನಿಯಂತ್ರಣ ಅಧಿಕಾರಿಗಳು ಆಗಿಂದಾಗ್ಗೆ ಮೆಡಿಕಲ್ ಸ್ಟೋರ್‌ಗಳಿಗೆ ಭೇಟಿ ನೀಡಿ, ಪರಿಶೀಲನೆ ಮಾಡಬೇಕೆಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಮಿಕಲ್ ಫ್ಯಾಕ್ಟರಿ ಸೇರಿದಂತೆ ಮತ್ತಿತರ ಕೈಗಾರಿಕಾ ಕೇಂದ್ರಗಳಿಗೆ ಕಾರ್ಮಿಕ ಇಲಾಖೆ ಅಧಿಕಾರಿಗಳು, ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಭೇಟಿ ನೀಡಿ, ಡ್ರಗ್ಸ್ ಗಳ ತಯಾರಿಕೆ ಮಾಡುತ್ತಿದ್ದಾರೆಯೇ ಎಂಬ ಬಗ್ಗೆ ಪರಿಶೀಲಿಸಬೇಕೆಂದರು.
ಪ್ರತಿಯೊಂದು ಶಾಲಾ-ಕಾಲೇಜುಗಳಲ್ಲಿ ಆಂಟಿ ಡ್ರಗ್ಸ್ ಸಮಿತಿಗಳನ್ನು ರಚಿಸುವುದರೊಂದಿಗೆ ಅವುಗಳು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂದ ಅವರು, ಕಾಲೇಜುಗಳಲ್ಲಿ ಪ್ರತೀ ತಿಂಗಳು 25 ನೇ ತಾರೀಕಿನಂದು ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ವ್ಯಸನ ಮುಕ್ತ ವನ್ನಾಗಿಸಲು ಮುಂದಾಗಬೇಕು ಎಂದರು.
ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಮೇಲೆ ನಿಗಾ ಇಡಬೇಕು. ಮಾದಕ ವಸ್ತುಗಳ ಸೇವನೆ ಬಗ್ಗೆ ಸಂಶಯ ಬಂದಲ್ಲಿ ಅಂತಹ ವಿದ್ಯಾರ್ಥಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕು.
ಪಾರ್ಸೆಲ್ ಮೂಲಕ ಮಾದಕ ವಸ್ತುಗಳನ್ನು ಸರಬರಾಜು ಮಾಡುವ ಸಾಧ್ಯತೆಗಳಿದ್ದು,ಈ ಬಗ್ಗೆ ಪರಿಶೀಲಿಸಬೇಕು. ಹೊರ ರಾಜ್ಯದಿಂದ ಬರುವ ಕಾರ್ಮಿಕರ ಬಗ್ಗೆಯೂ ಸಹ ಎಚ್ಚರ ವಹಿಸಬೇಕು. ಕರಾವಳಿ ಕಾವಲು ಪಡೆಯವರು ಬೋಟ್‌ಗಳನ್ನು ತಪಾಸಣೆ ನಡೆಸಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಸಹಾಯಕ ಕಮೀಷನರ್ ರಶ್ಮಿ, ಅಪರ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯಕ್, ಪೌರಾಯುಕ್ತ ಮಹಾಂತೇಶ ಹಂಗರಗಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಹಾಗೂ ಮತ್ತಿತರರು ಉಪಸ್ಥಿತರಿದ್ದರು.

















