ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಯಕ್ಷಗಾನ ರಂಗದಲ್ಲಿ ಯಾವುದೇ ಪ್ರತ್ಯಕ್ಷಗುರು ಇಲ್ಲದಿದ್ದರೂ, ಹಿರಿಯರ ವಾದನವನ್ನು ದೂರದಿಂದಲೇ ನೋಡುತ್ತಾ ಸ್ವ-ಪ್ರಯತ್ನದಿಂದ ಚೆಂಡೆ ಕಲಿತ ಆಧುನಿಕ ಏಕಲವ್ಯ ನಮ್ಮ ಕೋಟ ಶಿವಾನಂದರು ಎಂದು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯ ತಾರಾನಾಥ್ ಹೊಳ್ಳ ಹೇಳಿದರು.

ಅವರು ಶನಿವಾರ ಕೋಟ ಶಿವಾನಂದರ ಅಭಿಮಾನಿ ಬಳಗ ಮತ್ತು ಕಲಾ ವೇದಿಕೆ ಸಾಲಿಗ್ರಾಮದ ಆಶ್ರಯದಲ್ಲಿ ಹಿರಿಯ ಚಂಡೆ ವಾದಕ ಕೋಟ ಶಿವಾನಂದ ಅವರಿಗೆ ಗೌರವಾರ್ಪಣೆ ಹಾಗೂ ಮರಳಿ ಸಾಲಿಗ್ರಾಮದ ಯಕ್ಷರಂಗದಂಗಳಕ್ಕೆ ಎನ್ನುವ ಸಾಂಸ್ಕೃತಿಕ ರಂಗ ಸಂಜೆಯನ್ನು ಉದ್ಘಾಟಿಸಿ ಮಾತನಾಡಿದರು.
ಖ್ಯಾತ ನಟಿ ಪ್ರತಿಮಾ ನಾಯಕ್ ಅವರು ಅಭಿನಂದನಾ ನುಡಿಗಳನ್ನಾಡಿದ ಕಾಂತಾರ ಚಿತ್ರದ ಯಕ್ಷಗಾನ ರಂಗದ ಧ್ರುವತಾರೆ ಕೋಟ ಶಿವಾನಂದ ಅವರು ಕಲಾ ಜಗತ್ತಿನ ಹಿರಿಯ ಸಾಧಕರಾಗಿದ್ದರೂ, ಚೂರು ಸಹ ಅಹಂಕಾರವಿಲ್ಲದ ಮಗುವಿನಂತಹ ನಿಷ್ಕಲ್ಮಶ ಮನಸ್ಸಿನ ಅಪರೂಪದ ವ್ಯಕ್ತಿ ಎಂದರು.
ಕಾಂತಾರ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ಶಿವಣ್ಣನ ಸರಳ ವ್ಯಕ್ತಿತ್ವ ನನಗೆ ಹತ್ತಿರದಿಂದ ಪರಿಚಯವಾಯಿತು. ಹಿರಿಯ ಸಾಧಕನೆಂಬ ಯಾವುದೇ ಹಮ್ಮು-ಬಿಮ್ಮಿಲ್ಲದೆ ಸೆಟ್‌ನಲ್ಲಿ ಎಲ್ಲರೊಂದಿಗೆ ಸರಿಸಮಾನವಾಗಿ ಬೆರೆಯುತ್ತಿದ್ದ ಅವರ ಗುಣ ಮರೆಯಲಾಗದ್ದು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಉಪಾಧ್ಯಕ್ಷ ಚಂದ್ರಶೇಖರ್ ಉಪಾಧ್ಯಾಯ ವಹಿಸಿದ್ದರು.
ಮುಖ್ಯ ಅತಿಥಿಗಳಾದ ಕೋಟ ಸಿ.ಎ.ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಕಾರಿ ಶರತ್ ಕುಮಾರ್ ಶೆಟ್ಟಿ, ಕೋಟದ ಪಂಚವರ್ಣ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಪ್ರಗತಿಪರ ಕೃಷಿಕರು ರವೀಂದ್ರ ಐತಾಳ್, ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷ ಡಾ. ಕೆ.ಎಸ್.ಕಾರಂತ ಶುಭ ಹಾರೈಸಿದರು. ಶಶಿಧರ ಮಯ್ಯ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ರಮೇಶ್ ಮೆಂಡನ್ ಸಾಲಿಗ್ರಾಮ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಪತ್ರಕರ್ತ ಚಂದ್ರಶೇಖರ್ ಬೀಜಾಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಕಡ ಸೀತಾರಾಮ್ ಸೋಮಯಾಜಿ ವಂದಿಸಿದರು.
















