ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಾಷ್ಟ್ರೀಯ ಹೆದ್ದಾರಿ-66ರ ತ್ರಾಸಿ ಬೀಚ್ ಸಮೀಪದ ಅರಮ ದೇವಸ್ಥಾನದ ಎದುರು ಸೋಮವಾರ ಮಧ್ಯಾಹ್ನ ಎರಡು ಬೈಕ್‌ಗಳ ನಡುವೆ ಸಂಭವಿಸಿದ ಭೀಕರ ಮುಖಾಮುಖಿ ಡಿಕ್ಕಿಯಲ್ಲಿ ಓರ್ವ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮತ್ತೊಂದು ಬೈಕ್‌ನಲ್ಲಿದ್ದ ತಂದೆ ಹಾಗೂ ಮಗಳು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ನಡೆದಿದೆ.
ಮೃತರನ್ನು ಭಟ್ಕಳ ತಾಲೂಕಿನ ಸಣ್ಣಬಾವಿ ಸಾತುಮನೆ ನಿವಾಸಿ ನಾಗಪ್ಪ ನಾಯ್ಕ ಅವರ ಪುತ್ರ ದೀಪಕ್ ನಾಗಪ್ಪ ನಾಯ್ಕ (23)ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಪಡುಕೋಣೆ ಹಡವು ನಿವಾಸಿ ಪ್ಯಾಟ್ರಿಕ್ ವಾಝ್ (63) ಹಾಗೂ ಅವರ ಪುತ್ರಿ ಪ್ಲೆನ್ಸಿಟಾ (24) ಎಂದು ಗುರುತಿಸಲಾಗಿದೆ.
ಪ್ಯಾಟ್ರಿಕ್ ವಾಝ್ ಅವರು ತಮ್ಮ ಪುತ್ರಿಯನ್ನು ಬೈಕ್‌ನಲ್ಲಿ ಕರೆದುಕೊಂಡು ಬರುತ್ತಿದ್ದ ವೇಳೆ ಎದುರಿನಿಂದ ಬಂದ ದೀಪಕ್ ಚಲಾಯಿಸುತ್ತಿದ್ದ ಬೈಕ್ಗೆ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಮೂವರೂ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ದೀಪಕ್ ನಾಗಪ್ಪ ನಾಯ್ಕ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.
ಗಂಭೀರವಾಗಿ ಗಾಯಗೊಂಡಿರುವ ಪ್ಯಾಟ್ರಿಕ್ ವಾಝ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪುತ್ರಿ ಪ್ಲೆನ್ಸಿಟಾ ಕುಂದಾಪುರದ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತದ ತಕ್ಷಣ ಸ್ಥಳಕ್ಕಾಗಮಿಸಿದ ಟೀಮ್ ಎಂಎಚ್ಐ ಗಂಗೊಳ್ಳಿ ತುರ್ತು ಸ್ಪಂದನಾ ತಂಡದ ಆಂಬುಲೆನ್ಸ್ ಚಾಲಕ ಇಬ್ರಾಹಿಂ ಗಂಗೊಳ್ಳಿ ಹಾಗೂ ತಂಡವು ಗಾಯಾಳುಗಳನ್ನು ತ್ವರಿತವಾಗಿ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದೆ. ಅಲ್ಲದೆ, ಮೃತ ಯುವಕನ ವಿಳಾಸ ಪತ್ತೆಹಚ್ಚಿ ಅವರ ಕುಟುಂಬದವರಿಗೆ ಮಾಹಿತಿ ನೀಡಿ ಅಗತ್ಯ ನೆರವು ಒದಗಿಸಿದೆ.
ಈ ಸಂಬಂಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
















