ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಯಕ್ಷ ಕಲೆಯನ್ನು ಶಾಲಾ ಮಕ್ಕಳಿಗೆ ಪರಿಚಯಿಸುವ ಉದ್ದೇಶದಿಂದ ಯಕ್ಷ ಶಿಕ್ಷಣ ರಿ. ಉಡುಪಿ ಇವರ ಸಹಯೋಗದಲ್ಲಿ ಸರಕಾರಿ ಪ್ರೌಢಶಾಲೆ ಕೆದೂರಿನಲ್ಲಿ ಯಕ್ಷಗಾನ ತರಬೇತಿ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.
ಹೆಸ್ಕುತ್ತೂರಿನ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಅಬ್ದುಲ್ ರವೂಫ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ, “ಯಕ್ಷಗಾನವು ನಮ್ಮ ಸಂಸ್ಕೃತಿಯ ಕನ್ನಡಿಯಾಗಿದೆ. ಈ ಕಲೆಯು ಭಾಷಾ ಶುದ್ಧತೆಯನ್ನು ವೃದ್ಧಿಸುವುದರ ಜೊತೆಗೆ ಪುರಾಣ-ಇತಿಹಾಸದ ಜ್ಞಾನವನ್ನು ಮಕ್ಕಳಿಗೆ ಮನರಂಜನೆಯ ಮೂಲಕ ಕಲಿಸುತ್ತದೆ. ಕಲಿಯುವ ಆಸಕ್ತಿ ಮತ್ತು ನಿರಂತರ ಪ್ರಯತ್ನ ಇದ್ದರೆ ಯಾವುದೇ ಕಲೆಯನ್ನು ಸುಲಭವಾಗಿ ಕರಗತ ಮಾಡಿಕೊಳ್ಳಬಹುದು. ಓದಿನ ಜೊತೆಗೆ ಯಕ್ಷಗಾನದಲ್ಲಿ ತೊಡಗಿಸಿಕೊಳ್ಳುವುದರಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ” ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮಾತನಾಡಿದ ಯಕ್ಷಗುರು ಶ್ರೀ ನರಸಿಂಹ ತುಂಗ ಕೋಟ ಅವರು, “ಶೈಕ್ಷಣಿಕ ಬೆಳವಣಿಗೆಗೆ ಯಕ್ಷಗಾನ ಪೂರಕ ಕಲೆಯಾಗಿದೆ. ಇದು ಮಕ್ಕಳ ಸ್ಮರಣೆ, ವಾಚನ ಮತ್ತು ಬುದ್ಧಿಶಕ್ತಿಯನ್ನು ಚುರುಕುಗೊಳಿಸುತ್ತದೆ” ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯರಾದ ಉದಯಕುಮಾರ್ ಶೆಟ್ಟಿ ಅವರು ಯಕ್ಷಶಿಕ್ಷಣ ಟ್ರಸ್ಟ್‌ನ ಈ ಶ್ಲಾಘನೀಯ ಕಾರ್ಯವನ್ನು ಶ್ಲಾಘಿಸಿದರು. “ವಿದ್ಯಾರ್ಥಿಗಳು ಈ ಅವಕಾಶವನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಂಡು ಕಲೆಯನ್ನು ಕಲಿತು ಶಾಲೆಗೆ ಮತ್ತು ಊರಿಗೆ ಕೀರ್ತಿ ತರಬೇಕು” ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಸದಸ್ಯರಾದ ಮಲ್ಲಿಕಾ, ಶಿಕ್ಷಕರಾದ ಮನೋಹರ್, ದೀಪಾವತಿ, ಗೀತಾ, ವಸುಧಾ ಹಾಗೂ ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕರಾದ ರಮೇಶ್ ಕುಲಾಲ್ ಎನ್. ನಿರೂಪಿಸಿ, ರಾಜೇಂದ್ರ ಶೆಟ್ಟಿ ಸ್ವಾಗತಿಸಿ, ರತ್ನಾ ವಂದನಾರ್ಪಣೆ ಮಾಡಿದರು.
















