ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಟ್ರಕ್‌ವೊಂದು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಕೋಟೇಶ್ವರ ಕಿನಾರಾ ಜಂಕ್ಷನ್ ಸಮೀಪದ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಗುರುವಾರ ಮಧ್ಯಾಹ್ನದ ಸುಮಾರಿಗೆ ಸಂಭವಿಸಿದೆ.
ಇಡೂರು-ಕುಂಜ್ಞಾಡಿ ಜನ್ನಾಲು ಸಮೀಪದ ಕೊಳ್ತ ನಿವಾಸಿ ಭರತ್ ಶೆಟ್ಟಿ (33) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ಕೇರಳದಿಂದ ನಾಸಿಕ್ ಕಡೆಗೆ ಫ್ಲೈವುಡ್ ಸಾಗಿಸುತ್ತಿದ್ದ ಟ್ರಕ್ ಉಡುಪಿಯಿಂದ ಕುಂದಾಪುರದೆಡೆಗೆ ಸಾಗುವಾಗ ಅದೇ ಮಾರ್ಗವಾಗಿ ತೆರಳುತ್ತಿದ್ದ ಬೈಕ್‌ಗೆ ಢಿಕ್ಕಿಯಾಗಿದೆ. ಡಿಕ್ಕಿಯಾದ ಪರಿಣಾಮ ರಸ್ತೆಗೆ ಬಿದ್ದ ಭರತ್ ಅವರಿಗೆ ಗಂಭೀರ ಗಾಯಗಳಾಗಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತ ಭರತ್ ಕೋಟೇಶ್ವರ ಸಮೀಪದಲ್ಲಿನ ಪೈಂಟ್ ಶೋರೂಂನಲ್ಲಿ ಕೆಲಸ ನಿರ್ವಹಿಸುತ್ತಿದ್ದು ಕಳೆದ ವರ್ಷವಷ್ಟೇ ವಿವಾಹವಾಗಿತ್ತು ಎನ್ನಲಾಗಿದೆ.
ಮನೆಯಿಂದ ಕೆಲಸಕ್ಕೆ ಬಹುತೇಕ ಕಾರಿನಲ್ಲಿ ಬಂದುಹೋಗುತ್ತಿದ್ದ ಭರತ್ ಗುರುವಾರ ಬೈಕಿನಲ್ಲಿ ಬಂದಿದ್ದರು. ಟ್ರಕ್ ಚಾಲಕನ ಅಜಾಗರುಕತೆ ಹಾಗೂ ನಿರ್ಲಕ್ಷ್ಯತನದ ಚಾಲನೆ ಜೀವವೊಂದನ್ನು ಬಲಿಪಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕುಂದಾಪುರ ಸಂಚಾರ ಠಾಣೆ ಉಪನಿರೀಕ್ಷಕರಾದ ಅನೂಪ್ ನಾಯಕ್, ಸುಧಾ ಪ್ರಭು, ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಾಗಿದೆ.
















