ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನಮ್ಮಲ್ಲಿರುವ ಸಂಪತ್ತಿನ ಒಂದು ಅಂಶವನ್ನು ಶಾಲೆಗೆ ಕೊಡುಗೆಯಾಗಿ ನೀಡುವುದರಿಂದ ಸಂತೃಪ್ತಿಯ ಜೊತೆಗೆ ಸೇವೆಯ ಸಾರ್ಥಕತೆ ದೊರೆಯುತ್ತದೆ. ನಮಗೆ ಸಾಮರ್ಥ್ಯ ಇರುವಾಗ ಒಂದಿಷ್ಟು ಕೊಡುಗೆಗಳನ್ನು ಸಮಾಜಕ್ಕೆ ನೀಡಿದಾಗ ಸಂತೃಪ್ತಿ ಮೂಡುತ್ತದೆ ಎಂದು ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಹೇಳಿದರು.

ಅವರು ಶುಕ್ರವಾರ ಮೈಕ್ರೋಸಾಪ್ಟ್ ಕಾರ್ಪೊರೇಶನ್ ಇಂಡಿಯಾ ಪ್ರೈ.ಲಿ ಹಾಗೂ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ರಿ. ಉಪ್ಪುಂದ ಇದರ ಜಂಟಿ ಆಶ್ರಯದಲ್ಲಿ ಬಿಜೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಂಪ್ಯೂಟರ್ ಲ್ಯಾಬ್ ಉದ್ಘಾಟಿಸಿ ಮಾತನಾಡಿದರು. ಬೈಂದೂರು ವ್ಯಾಪ್ತಿಯಲ್ಲಿ ಟ್ರಸ್ಟ್ ಹಾಗೂ ಗೋವಿಂದ ಬಾಬು ಪೂಜಾರಿ ಅವರ ವೈಯಕ್ತಿಕ ನೆಲೆಯಲ್ಲಿ ಅನೇಕ ಶಾಲೆಗಳಿಗೆ ಕೊಡುಗೆಗಳನ್ನು ನೀಡುತ್ತಿದ್ದು ಸರಕಾರಿ ಶಾಲೆಗಳು ಇನ್ನಷ್ಟು ಅಭಿವೃದ್ಧಿಯಾಗಲಿದೆ ಎಂದರು.
ಉದ್ಯಮಿ ಹಾಗೂ ಹಾಗೂ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ರಿ. ಉಪ್ಪುಂದ ಮ್ಯಾನೆಜಿಂಗ್ ಟ್ರಸ್ಟಿ ಡಾ. ಗೋವಿಂದ ಬಾಬು ಪೂಜಾರಿ ಅವರು ಮಾತನಾಡಿ, ದೇವರು ಅವಕಾಶ ನೀಡಿದಾಗ ಕೈಲಾದಷ್ಟು ಶಾಲೆಗಳಿಗೆ ಕೊಡುಗೆಯಾಗಿ ನೀಡುತ್ತಿರುವುದು ನಮಗೆ ದೊರೆತ ಭಾಗ್ಯ ಎಂದು ತಿಳಿದುಕೊಂಡು ವಿದ್ಯೆ ಉದ್ಯೋಗ ಹಾಗೂ ಆರ್ಥಿಕ ಸದೃಡತೆ ನೀಡುವ ಪ್ರಯತ್ನ ಮಾಡುತಿದ್ದೇನೆ. ಮುಂದೆಯೂ ಸಹ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಮೂಲಕ ನಿರಂತರ ಸಮಾಜಮುಖಿ ಕೆಲಸ ನಡೆಯುತ್ತದೆ. ಗ್ರಾಮೀಣ ಭಾಗದ ಎಲ್ಲಾ ವಿದ್ಯಾರ್ಥಿಗಳು ಕಂಪ್ಯೂಟರ್ ಲ್ಯಾಬ್ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ರಮೇಶ ವಿ. ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಂದೀಶ್ ದೇವಾಡಿಗ, ರಾಜೇಂದ್ರ ಬಿಜೂರು, ಗಿರೀಶ್ ಶ್ಯಾನುಭಾಗ್, ಗಂಗಾಧರ ದೇವಾಡಿಗ, ಅಲಕ ಸುರೇಶ್ ಬಿಜೂರು, ಗೋಪಾಲ ಪೂಜಾರಿ ವಸ್ರೆ, ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವ್ಯವಸ್ಥಾಪಕ ನಾಗರಾಜ ಪಿ. ಯಡ್ತರೆ ಮೊದಲಾದವರು ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ ಶಾಲೆಗೆ ಕಂಪ್ಯೂಟರ್ ಲ್ಯಾಬ್ ಕೊಡುಗೆಯಾಗಿ ನೀಡಿದ ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ರಿ. ಉಪ್ಪುಂದ ಮ್ಯಾನೆಜಿಂಗ್ ಟ್ರಸ್ಟಿ ಡಾ. ಗೋವಿಂದ ಬಾಬು ಪೂಜಾರಿ ಅವರನ್ನು ಶಾಲೆಯ ವತಿಯಿಂದ ಸಮ್ಮಾನಿಸಲಾಯಿತು. ಕಾರ್ಯಕ್ರಮವನ್ನು ಶಾಲಾ ಶಿಕ್ಷಕ ಮಂಜುನಾಥ ಎಸ್. ಸ್ವಾಗತಿಸಿ, ನಿರೂಪಿಸಿದರು.
















