ಕುಂದಾಪ್ರ ಡಾಟ್ ಕಾಂಸ ಉದ್ದಿ.
ಕುಂದಾಪುರ: ಲೋಕಸಭಾ ಚುನಾವಣೆ ಹಾಗೂ ಇತ್ತೀಚಿನ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಸಾಧಿಸಿದ ಗೆಲುವು ಕಾರ್ಯಕರ್ತರಲ್ಲಿ ಹೊಸ ಚೇತನ ಮತ್ತು ಚೈತನ್ಯವನ್ನು ತಂದುಕೊಟ್ಟಿದೆ. ಅದೇ ನೆಲೆಗಟ್ಟಿನಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲೂ ಮುಂದಿನ ದಿನಗಳಲ್ಲಿ ಕಾಂಗ್ರೆಸ್ನ ಗೆಲುವಿನ ಸುವರ್ಣ ಯುಗ ಹಾಗೂ ವಿಜಯಯಾತ್ರೆ ಆರಂಭವಾಗಬೇಕು ಎಂದು ಮಾಜಿ ಸಚಿವರಾದ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.
ಅವರು ಗುರುವಾರ ಬೆಳಿಗ್ಗೆ ಕೋಟೇಶ್ವರದ ಸಹನಾ ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ಕುಂದಾಪುರ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಕೆ. ಸದಾನಂದ ಶೆಟ್ಟಿ ಅವರ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಅತ್ಯಂತ ಸುಸೂತ್ರವಾಗಿ ಜವಾಬ್ದಾರಿಗಳನ್ನು ಹಂಚಿಕೊಂಡು ಕೆಲಸ ಮಾಡುತ್ತಿದ್ದಾರೆ. ಇದು ನಮಗೆ ಆದರ್ಶಪ್ರಾಯ. ಕೇವಲ ನಾಯಕರೇ ಬಂದು ಎಲ್ಲವನ್ನೂ ಮಾಡುತ್ತಾರೆ ಎಂದು ಕಾರ್ಯಕರ್ತರು ಸುಮ್ಮನೆ ಕೂರಬಾರದು ಎಂದರು.

ಇದೇ ವೇಳೆ ಅವರು ಸಂಘಟನೆಗೆ ಮೂರು ಪ್ರಮುಖ ಸಲಹೆ ನೀಡಿದರು. ಸಣ್ಣಪುಟ್ಟ ಗೊಂದಲಗಳಿಗೆ ಪ್ರತಿಯೊಬ್ಬರೂ ಪತ್ರ ಹಿಡಿದು ಹೈಕಮಾಂಡ್ ಅಥವಾ ಬೆಂಗಳೂರಿಗೆ ಹೋಗುವ ಅಗತ್ಯವಿಲ್ಲ. ಜಿಲ್ಲೆಯ ಸಮಸ್ಯೆಗಳನ್ನು ನಾವೇ ಒಟ್ಟಾಗಿ ಕುಳಿತು ಬಗೆಹರಿಸಿಕೊಳ್ಳಬೇಕು. ಪಂಚಾಯತ್ ಮಟ್ಟದಲ್ಲಿ ಮಾಜಿ ಅಧ್ಯಕ್ಷರಾಗಿದ್ದವರನ್ನು ಹಾಗೂ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಎಲ್ಲರನ್ನೂ ಜೊತೆಗೂಡಿಸಿಕೊಂಡು ಹೋದರೆ ಗೊಂದಲಗಳು ಸೃಷ್ಟಿಯಾಗುವುದಿಲ್ಲ.
ನಮ್ಮ ವಿರೋಧಿಗಳು ಕಾಂಗ್ರೆಸ್ ಬೆಂಬಲಿಗರ ವೋಟ್‌ಗಳನ್ನು ಪಟ್ಟಿಯಿಂದ ಡಿಲೀಟ್ ಮಾಡುವ ಷಡ್ಯಂತ್ರ ನಡೆಸುತ್ತಿದ್ದಾರೆ. ಬೂತ್ ಮಟ್ಟದ ಪದಾಧಿಕಾರಿಗಳು ಮತದಾರರ ಪಟ್ಟಿಯ ಕಡೆಗೆ ತೀವ್ರ ನಿಗಾ ಇಡಬೇಕು ಎಂದು ಹೇಳಿದರು.

ಇಂದಿನ ಯುವ ಪೀಳಿಗೆಗೆ ದೇಶದ ಇತಿಹಾಸದ ಬಗ್ಗೆ ಅರಿವು ಕಡಿಮೆ ಇದೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ 500ಕ್ಕೂ ಹೆಚ್ಚು ಸಂಸ್ಥಾನಗಳನ್ನು ಒಗ್ಗೂಡಿಸಿದ್ದು, ದೇಶಕ್ಕೆ ಐಐಟಿಗಳನ್ನು ನೀಡಿದ್ದು ಹಾಗೂ ರಾಜೀವ್ ಗಾಂಧಿಯವರ ಅವಧಿಯಲ್ಲಿ ಮತದಾನದ ವಯಸ್ಸನ್ನು 21ರಿಂದ 18ಕ್ಕೆ ಇಳಿಸಿದ್ದು ಇದೇ ಕಾಂಗ್ರೆಸ್. ಭೂಸುಧಾರಣೆ ತಂದು ಬಡವನಿಗೆ ಭೂಮಿ ಕೊಟ್ಟ ಇತಿಹಾಸವನ್ನು ನಾವು ಮನೆಮನೆಗೆ ತಲುಪಿಸಬೇಕು ಎಂದು ಜಯಪ್ರಕಾಶ್ ಹೆಗ್ಡೆ ನುಡಿದರು.
ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರಾದ ವಿನಯ್ ಕುಮಾರ್ ಸೊರಕೆ ಅವರು ಮಾತನಾಡಿ, ಬಡವರ ಪರ ನಿಂತ ಕಾಂಗ್ರೆಸ್‌ನ ಐತಿಹಾಸಿಕ ಸಾಧನೆಗಳನ್ನು ಶ್ಲಾಘಿಸಿದ ಅವರು ಚುನಾವಣೆಗೂ ಮುನ್ನ ನೀಡಿದ ಭರವಸೆಗಳನ್ನು ಅಧಿಕಾರಕ್ಕೆ ಬಂದ ಕೇವಲ ಮೂರೇ ತಿಂಗಳಲ್ಲಿ ಜಾರಿಗೆ ತಂದ ಇತಿಹಾಸ ನಮ್ಮ ಸರ್ಕಾರದಕ್ಕಿದೆ. ಇಂದು ‘ಗೃಹಲಕ್ಷ್ಮಿʼ ಯೋಜನೆಯಡಿ 1.21 ಕೋಟಿಗೂ ಹೆಚ್ಚು ಮಹಿಳೆಯರಿಗೆ ಪ್ರತಿ ತಿಂಗಳು ₹2,000 ತಲುಪುತ್ತಿದೆ. ಉಚಿತ ಬಸ್ ಪ್ರಯಾಣದ ‘ಶಕ್ತಿ’, ‘ಗೃಹಜ್ಯೋತಿ’ ಹಾಗೂ ‘ಅನ್ನಭಾಗ್ಯ’ ಯೋಜನೆಗಳ ಮೂಲಕ ಪ್ರತಿ ಬಡ ಕುಟುಂಬಕ್ಕೆ ತಿಂಗಳಿಗೆ ₹5,000 ದಿಂದ ₹6,000 ಉಳಿತಾಯವಾಗುತ್ತಿದೆ. ಇದು ಬಿಟ್ಟಿ ಕೊಡುಗೆಯಲ್ಲ, ಬಡವರ ಬದುಕನ್ನು ಆರ್ಥಿಕವಾಗಿ ಸಬಲಗೊಳಿಸುವ ಯೋಜನೆ ಎಂದರು.
ರಾಮಮಂದಿರ ನಿರ್ಮಾಣದ ನೆಪದಲ್ಲಿ ದೇಶಾದ್ಯಂತ, ಅದರಲ್ಲೂ ಕರಾವಳಿ ಭಾಗದಲ್ಲಿ ಕೋಟ್ಯಂತರ ರೂಪಾಯಿಗಳನ್ನು ಸಂಗ್ರಹಿಸಲಾಯಿತು. ಆದರೆ ಆ ಇಟ್ಟಿಗೆ ಪೂಜೆ, ನಿಧಿ ಸಂಗ್ರಹಣೆಯ ಹಣದ ಲೆಕ್ಕ ಎಲ್ಲಿದೆ? ಭಜನಾ ಮಂದಿರಗಳ ನಿಷ್ಠಾವಂತ ಭಕ್ತರನ್ನು ದಾರಿ ತಪ್ಪಿಸಿ ರಾಜಕೀಯ ಲಾಭ ಪಡೆಯುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಸ್ವತಃ ‘ಕಾವಲುಗಾರ’ ಎಂದು ಕರೆದುಕೊಳ್ಳುವವರೇ ದೇವಸ್ಥಾನದ ಧನವನ್ನು ಲೂಟಿ ಮಾಡಲು ಶಾಮೀಲಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಂ.ಎ. ಗಫೂರ್ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷ ಎಂದರೆ ಕೇವಲ ಅಧಿಕಾರಕ್ಕಾಗಿ ಇರುವ ಪಕ್ಷವಲ್ಲ, ಅದೊಂದು ನಿರಂತರ ಚಳುವಳಿ. ಹಿರಿಯ ನಾಯಕರಾದ ಪ್ರತಾಪ್ ಚಂದ್ರ ಶೆಟ್ಟಿ ಅವರು ಸದ್ಯ ರಾಜಕೀಯವಾಗಿ ನಿವೃತ್ತರಾಗಿರಬಹುದು, ಆದರೆ ಅವರು ಜೀವಂತವಾಗಿರುವವರೆಗೂ ಈ ಭಾಗದ ಕಾಂಗ್ರೆಸ್ ಪಕ್ಷದ ದೊಡ್ಡ ಮಾರ್ಗದರ್ಶಕರಾಗಿ ಇರುತ್ತಾರೆ. ಮುಂಬರುವ ದಿನಗಳಲ್ಲಿ ನಮ್ಮ ಹೋರಾಟ ತೀವ್ರವಾಗಬೇಕು. ಕುಂದಾಪುರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕರು ಮುಂದಿನ ದಿನಗಳಲ್ಲಿ ವಿಧಾನಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸುವಂತೆ ಮಾಡುವುದೇ ನಮ್ಮ ಮುಂದಿನ ಏಕೈಕ ಸಂಕಲ್ಪ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಮೊಳಹಳ್ಳಿ ದಿನೇಶ್ ಹೆಗ್ಡೆ ಅವರು ಮಾತನಾಡಿ, ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಜನರ ಕೈಸೇರಿವೆ. ಇದರೊಂದಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಯುವಜನರಿಗಾಗಿ ‘ಭಾರತ ಜೋಡೋ ಸಂಘ’ ರಚಿಸಿ, ಅದಕ್ಕೆ ಪ್ರತಿವರ್ಷ ₹10 ಲಕ್ಷ ಅನುದಾನ ನೀಡುವ ಯೋಜನೆಯನ್ನು ರೂಪಿಸುತ್ತಿದ್ದಾರೆ. ಇದನ್ನು ಗ್ರಾಮೀಣ ಮಟ್ಟದಲ್ಲಿ ಸುದೃಢವಾಗಿ ಕಟ್ಟಿದರೆ ಪಕ್ಷಕ್ಕೆ ಮತ್ತಷ್ಟು ಬಲ ಬರಲಿದೆ. ಕುಂದಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡು ಸುಮಾರು 28 ವರ್ಷಗಳಾಗುತ್ತಾ ಬಂದಿವೆ (1999 ರ ಬಳಿಕ). ಈ ಇತಿಹಾಸವನ್ನು ನಾವು ಬದಲಾಯಿಸಿ, ಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಕುಂದಾಪುರದಲ್ಲಿ ಕಾಂಗ್ರೆಸ್ ಧ್ವಜ ಹಾರಿಸಬೇಕು ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರ ಸಮ್ಮುಖದಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಅವರಿಂದ ಕಾಂಗ್ರೆಸ್ ಧ್ವಜ ಸ್ವೀಕರಿಸುವ ಮೂಲಕ ನೂತನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕೆ. ಸದಾನಂದ ಶೆಟ್ಟಿ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು.
ಬಳಿಕ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲ. ನಾವೆಲ್ಲರೂ ಒಂದೇ ಮನೆಯವರಂತೆ ಇದ್ದೇವೆ. ನನ್ನ ಇಡೀ ರಾಜಕೀಯ ಜೀವನ ಭ್ರಷ್ಟಾಚಾರ ಮುಕ್ತವಾಗಿದೆ. ಈ ಹಿಂದೆ ಗ್ರಾಮೀಣಾಭಿವೃದ್ಧಿಗಾಗಿ ರಾಜೀವ್ ಗಾಂಧಿಯವರು ತಂದ ವಿಕೇಂದ್ರೀಕರಣ ವ್ಯವಸ್ಥೆಯಡಿ ಎರಡು ಬಾರಿ ಅವಿರೋಧವಾಗಿ ಗ್ರಾಮ ಪಂಚಾಯತ್ ಸದಸ್ಯನಾಗಿ, ಮಂಡಲ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ವ್ಯಾಪ್ತಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ನಮ್ಮಲ್ಲಿ ಸಂಸದರಿಲ್ಲ, ಶಾಸಕರಿಲ್ಲ. ಇಂತಹ ಸವಾಲಿನ ಪರಿಸ್ಥಿತಿಯಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸಿ, ಕುಂದಾಪುರ ಬ್ಲಾಕ್ ವ್ಯಾಪ್ತಿಯ ಎಲ್ಲಾ 131 ಬೂತ್‌ಗಳಿಗೆ ನಾನೇ ಖುದ್ದಾಗಿ ಭೇಟಿ ನೀಡಿ ಸಕ್ರಿಯ ಗ್ರಾಮ ಸಮಿತಿಗಳನ್ನು ರಚಿಸುತ್ತೇನೆ ಎಂದು ಶಪಥ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್‌ನ ನಿಕಟಪೂರ್ವ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ, ಅಧಿಕಾರ ಹಸ್ತಾಂತರಿಸಿದರು.
ವೇದಿಕೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸುಕುಮಾರ್ ಬಿ. ಶೆಟ್ಟಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ನಾರಾಯಣ ಗುರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಂಜುನಾಥ್ ಪೂಜಾರಿ, ಕೆಪಿಸಿಸಿ ಸದಸ್ಯರಾದ ಮಲ್ಯಾಡಿ ಶಿವರಾಮ ಶೆಟ್ಟಿ, ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್, ಕುಂದಾಪುರ ಮಹಿಳಾ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ ದೇವಕಿ ಸಣ್ಣಯ್ಯ ಉಪಸ್ಥಿತರಿದ್ದರು.
ಕಾಂಗ್ರೆಸ್ ಯುವ ಮುಖಂಡ ವಿಕಾಸ್ ಹೆಗ್ಡೆ, ಕುಂದಾಪುರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಇಚ್ಚಿತಾರ್ಥ ಶೆಟ್ಟಿ, ಕುಂದಾಪುರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅಭಿಜಿತ್ ಪೂಜಾರಿ, ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಶೆಟ್ಟಿ ಬಜೆಗೋಳಿ, ಕಾಂಗ್ರೆಸ್ ಮುಖಂಡ ಬೀಜಾಡಿ ಅಶೋಕ್ ಪೂಜಾರಿ, ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್, ಸಹಕಾರಿ ಸಂಘದ ಅಧ್ಯಕ್ಷ ಮೊಳಹಳ್ಳಿ ಮಹೇಶ್ ಹೆಗ್ಡೆ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಕಾಂಗ್ರೆಸ್ ಮುಖಂಡ ಬೆಳ್ವೆ ಮುಸ್ತಾಕ್ ಅಹ್ಮದ್ ಹಾಗೂ ಪಕ್ಷದ ಹಿರಿಯ, ಕಿರಿಯ ಮುಖಂಡರು ಮತ್ತು ಸಹಸ್ರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಆಶಾ ಕರವೆಲ್ಲೋ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮವನ್ನು ಅಕ್ಷಯ ಹೆಗ್ಡೆ ನಿರೂಪಿಸಿ, ವಂದಿಸಿದರು.
















