ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಯಡ್ತಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಜನ ಸಂಪರ್ಕ ಸಭೆ ನಡೆಯಿತು. ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಅವರು ಮಾತನಾಡಿ, ಜನಸಂಪರ್ಕ ಎನ್ನುವುದು ಕೇವಲ ಸಭೆಯಲ್ಲ ಅದು ಜನರ ನೋವನ್ನು ಆಲಿಸುವ ವೇದಿಕೆ. ಅದು ಜನರ ಸಮಸ್ಯೆಗೆ ತಕ್ಷಣ ಪರಿಹಾರ ಕಂಡುಕೊಳ್ಳುವ ಸಂಕಲ್ಪ ಅದು ಪ್ರತಿಯೊಬ್ಬ ನಾಗರಿಕನ ಧ್ವನಿಗೆ ಬೆಲೆ ಕೊಡುವ ಪ್ರಜಾಪ್ರಭುತ್ವದ ಸಂವಾದ ಎಂದರು.

ನಂತರ ನಡೆದ ಸಾರ್ವಜನಿಕ ಕುಂದುಕೊರತೆ ಆಲಿಕೆಯಲ್ಲಿ ಗ್ರಾಮಸ್ಥರು ರಸ್ತೆ, ಕುಡಿಯುವ ನೀರಿನ ಸಮಸ್ಯೆ, ವಸತಿ ಯೋಜನೆ, ಮೂಲಸೌಕರ್ಯ ಮತ್ತು ಕಂದಾಯಕ್ಕೆ ಸಂಬಂಧಿಸಿದ ಮನವಿಗಳನ್ನು ಸಲ್ಲಿಸಿದರು. ಅಧಿಕಾರಿಗಳೊಂದಿಗೆ ಚರ್ಚಿಸಿದ ಶಾಸಕರು, ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ್ ಹೆಗ್ಡೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಬ್ರಹ್ಮಾವರ ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ರಾಮದಾಸ್, ವಡ್ಡರ್ಸೆ ಗ್ರಾ.ಪಂ ಆಡಳಿತಾಧಿಕಾರಿ ಸುರೇಶ್ ಬಂಗೇರ, ಗ್ಯಾರಂಟಿ ಸಮಿತಿ ಸದಸ್ಯರಾದ ಡಾ. ಸುನೀತ್ ಶೆಟ್ಟಿ ಮತ್ತು ಯಡ್ತಾಡಿ ಗ್ರಾ.ಪಂ ನ ಮಾಜಿ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸ್ವಾಗತ ಮತ್ತು ನಿರೂಪಣೆಯನ್ನು ಯಡ್ತಾಡಿ ಗ್ರಾ.ಪಂ ಪಿಡಿಒ ಉಮೇಶ್ ನಿರ್ವಹಿಸಿದರು.
















