ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಸಮೃದ್ಧ ಬೆಳೆಗಾಗಿ ಸಕಾಲದಲ್ಲಿ ಉತ್ತಮ ಮಳೆಯಾಗಬೇಕು ಹಾಗೂ ವರುಣ ದೇವರ ಅನುಗ್ರಹ ದೊರೆಯಬೇಕು ಎಂಬ ಸಂಕಲ್ಪದೊಂದಿಗೆ ಸೋಮವಾರ ಬೆಳಿಗ್ಗೆ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನ, ಕೋಟೇಶ್ವರದ ಕೋಟಿತೀರ್ಥ ಸರೋವರದಲ್ಲಿ ಪರ್ಜನ್ಯ ಜಪವನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು.
ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಪ್ರಧಾನ ತಂತ್ರಿಗಳಾದ ಪ್ರಸನ್ನ ಕುಮಾರ್ ಐತಾಳರ ನೇತೃತ್ವದಲ್ಲಿ ನಡೆದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ 50ಕ್ಕೂ ಅಧಿಕ ವೈದಿಕರು ಭಾಗವಹಿಸಿ ವೇದಮಂತ್ರಗಳೊಂದಿಗೆ ಪರ್ಜನ್ಯ ಜಪ ನೆರವೇರಿಸಿದರು. ಈ ಕಾರ್ಯಕ್ರಮವನ್ನು ಶಂಕರ ಜಯಂತಿ ಉತ್ಸವ ಸಮಿತಿಯ ಸಹಭಾಗಿತ್ವದಲ್ಲಿ ಆಯೋಜಿಸಲಾಗಿತ್ತು.
ಬೆಳಿಗ್ಗೆ 8.00 ಗಂಟೆಗೆ ಆರಂಭವಾದ ಜಪ ಸುಮಾರು 10.00 ಗಂಟೆಯವರೆಗೆ ನಡೆಯಿತು. ಬಳಿಕ ಶ್ರೀ ಕೋಟಿಲಿಂಗೇಶ್ವರ ದೇವರಿಗೆ ಮಂಗಳಾರತಿ ಸಲ್ಲಿಸಿ, ರಾಜ್ಯದಲ್ಲಿ ಉತ್ತಮ ಮಳೆ, ಸಮೃದ್ಧ ಕೃಷಿ, ರೈತರ ಕಲ್ಯಾಣ ಹಾಗೂ ಲೋಕಕ್ಷೇಮಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ವೈದಿಕರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡರು.
















